ಮುಂಡಗೋಡ: ಪಟ್ಟಣದ ಕಂಬಾರಗಟ್ಟಿ ಕೆರೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಎರಡು ಜಿಂಕೆಗಳನ್ನು ಯುವಕರು ಹಿಡಿದು ಶುಕ್ರವಾರ ಕಾಡಿಗೆ ಬಿಟ್ಟಿದ್ದಾರೆ.
ಆಹಾರ ಅರಸುತ್ತ ಪಟ್ಟಣಕ್ಕೆ ಬಂದ ಜಿಂಕೆಗಳನ್ನು ನಾಯಿಗಳು ಬೆನ್ನಟ್ಟಿದ್ದರಿಂದ ಪ್ರಾಣಭಯದಿಂದ ಓಡಲು ಹೋಗಿ ಕೆರೆಯಲ್ಲಿ ದಟ್ಟವಾಗಿ ಬೆಳೆದ ಕೆಸರು ಬಳ್ಳಿಗಳ ಮಧ್ಯೆ ಸಿಲುಕಿಕೊಂಡವು. ಹೊರಗಡೆ ಬರಲು ತೀವ್ರ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ.
ಇದನ್ನು ಗಮನಿಸಿದ ಸನಿಹದಲ್ಲೇ ಇದ್ದ ನಾಲ್ವರು ಯುವಕರು ಕೆರೆಯಲ್ಲಿ ಇಳಿದು ಕೆಲವು ಸಮಯದವರೆಗೆ ಪ್ರಯತ್ನಿಸಿ ಜಿಂಕೆಗಳನ್ನು ಕೆರೆಯಿಂದ ಮೇಲೆತ್ತಿ ರಕ್ಷಿಸಿದ್ದಾರೆ.
ವಿನಾಯಕ ಹನುಮಂತ ಪುಟ್ಟು, ಅರಣ್ಯ ಇಲಾಖೆ ಸಿಬ್ಬಂದಿ ಕೃಷ್ಣ ಚಂದ್ರಪ್ಪ ದೊಡ್ಡಮನಿ, ಉಪ ವಲಯ ವಲಯ ಅರಣ್ಯಾಧಿಕಾರಿ ಗಿರೀಶ ಕೊಳೇಕರ ಮುಂತಾದವರು ಇದ್ದರು.