ಶಿರಸಿ: ತೋಟಗಾರ್ಸ್ ಗ್ರೀನ್ ಗ್ರೂಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಲಿ. ಹಾಗು ಟಿ.ಆರ್.ಸಿ.ಎ.ಸಿ. ಸೊಸೈಟಿ ಶಿರಸಿ ಇವರ ಸಹಯೋಗದಲ್ಲಿ ಕಾರ್ಬನ್ ಫೈಬರ್ ದೋಟಿಯಲ್ಲಿ ಅಡಿಕೆ ಕೊನೆ ಕೊಯ್ಯುವ ಹಾಗು ಔಷಧ ಸಿಂಪಡಿಸುವ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಕಾರ್ಯಕ್ರಮ ತಾಲೂಕಿನ ಮೂಲೇಮನೆಯಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತ್ಯಾಗಲಿ ಸೊಸೈಟಿಯ ಅಧ್ಯಕ್ಷ ಎನ್ ಬಿ ಹೆಗಡೆ ಮತ್ತಿಹಳ್ಳಿ, ಉತ್ತರ ಕನ್ನಡದಲ್ಲಿನ ಹೆಚ್ಚಿನ ಜನರ ಜೀವನ ಅಡಿಕೆಯ ಮೇಲೆಯೇ ಅವಲಂಬಿತವಾಗಿದೆ. ಇಲ್ಲಿನ ಬಹುತೇಕರದ್ದು ಸಾಂಪ್ರದಾಯಿಕ ಕೃಷಿಯಾಗಿದೆ. ಅಡಿಕೆ ಬೆಳೆಯುವುದರಲ್ಲಿ ಉತ್ತರ ಕನ್ನಡ ಜಿಲ್ಲೆ ಆರನೇ ಸ್ಥಾನದಲ್ಲಿದೆ. ಚಿತ್ರದುರ್ಗ, ಚನ್ನಗಿರಿ ಸೇರಿದಂತೆ ರಾಜ್ಯದ ಇನ್ನಿತರ ಭಾಗದ ಅಡಿಕೆ ರೈತರು ನಮಗಿಂತಲೂ ಆಧುನಿರಾಗಿದ್ದಾರೆ. ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಅಲ್ಲಿನ ರೈತರು ದೋಟಿ ಬಳಸಿ ಅಡಿಕೆ ಕೊಯ್ಲು ಮಾಡುತ್ತಿದ್ದಾರೆ. ದೋಟಿ ಕೊಯ್ಲಿನಿಂದ ಕಾರ್ಮಿಕರಿಗೆ ಅಪಾಯ ರಹಿತವಾಗಿದೆ. ಕೆಲಸ ವೇಗ ಪಡೆಯುವುದರ ಜೊತೆಗೆ ಆರ್ಥಿಕವಾಗಿಯೂ ಅನುಕೂಲಕರವಾಗಿದೆ ಎಂದರು.
ಸಂಸ್ಥೆಗಳ ಮೂಲಕ ಕಾರ್ಮಿಕರು ಹೆಜ್ಜೆಯನ್ನಿಟ್ಟಾಗ ರೈತರಿಗೆ ಇದು ಹೆಚ್ಚು ಅನುಕೂಲ ಮತ್ತು ಆರ್ಥಿಕವಾಗಿಯೂ ಉಳಿತಾಯವಾಗುತ್ತದೆ. ಜೊತೆಗೆ ಸಂಸ್ಥೆಯೂ ಸಹ ತನ್ನ ನೌಕರರಿಗೆ ಪ್ರಾವಿಡೆಂಟ್ ಫಂಡ್, ಇಎಸ್‌ಐ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡಲು ಅವಕಾಶವಿದೆ. ಈ ವ್ಯವಸ್ಥೆಯಲ್ಲಿ ವರ್ಷದಲ್ಲಿ ಕನಿಷ್ಟವೆಂದರೂ 7-8 ತಿಂಗಳು ಕಾಲ ಕೆಲಸ ನೀಡಲು ಸಾಧ್ಯ ಎಂದರು.
ಹೊರಗಿನ ಕಾರ್ಮಿಕರ ಮೇಲೆ ಹೆಚ್ಚು ಅವಲಂಬಿತರಾಗದೇ ಸ್ಥಳೀಯ ಕಾರ್ಮಿಕರು ಹೆಚ್ಚು ಕೌಶಲ್ಯವನ್ನು ಪಡೆದರೆ, ಮುಂದಿನ ದಿನದಲ್ಲಿ ಅಡಿಕೆ ಕೊಯ್ಲಿನ ಸಮಸ್ಯೆಯನ್ನು ನಿವಾರಿಸಬಹುದು. ಇಂದಿನ ದಿನದಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಪಡೆಯುವ ಸಂಬಳವನ್ನೂ ಸಹ ದೋಟಿ ಕೋಯ್ಲಿನ ಮೂಲಕ ಅರಾಮಾಗಿ ಪಡೆಯಬಹುದು, ಆದರೆ ಅದಕ್ಕೆ ತಕ್ಕ ಪರಿಶ್ರಮ ಅತ್ಯಗತ್ಯ ಎಂದರು.
ಅಡಿಕೆ ಬೆಳೆಗಾರರು ಆಧುನಿಕ ಕೃಷಿಯನ್ನು ಅಳವಡಿಸಿಕೊಳ್ಳುವುದರಿಂದ ಜಮೀನು ಪರಬಾರೆಯಾಗುವುದನ್ನು ಕಡಿಮೆ ಮಾಡಬಹುದರ ಜೊತೆಗೆ ಹಳ್ಳಿಗಳೂ ಸಹ ತುಂಬುತ್ತವೆ. ಈ ದಿಶೆಯಲ್ಲಿ ನಾವೆಲ್ಲರೂ ಸೇರಿ ಕಾರ್ಯನಿರ್ವಹಿಸಬೇಕಿದೆ ಎಂದರು.
ತೋಟಗಾರ್ಸ್ ಗ್ರೀನ್ ಗ್ರೂಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿಯ ಅಧ್ಯಕ್ಷ ಶ್ರೀಧರ ರಾಮಕೃಷ್ಣ ಹೆಗಡೆ ಕಡವೆ ಮಾತನಾಡಿ, ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯತೆ. ಯಂತ್ರೋಪಕರಣಗಳ ಸರಿಯಾದ ಬಳಕೆಯಿಂದ ಕೃಷಿಯನ್ನು ಹೆಚ್ಚು ಲಾಭದಾಯಕಗೊಳಿಸಬಹುದು. ಪ್ರಸ್ತುತ ಕೃಷಿಯಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ ಕಡಿಮೆಗೊಳಿಸುವ ಉದ್ದೇಶದಿಂದ ನಮ್ಮ ಗ್ರೀನ್ ಗ್ರೂಪ್ ಕಂಪನಿ ವತಿಯಿಂದ ಕಾರ್ಬನ್ ಫೈಬರ್ ದೋಟಿ ಮೂಲಕ ಕೊನೆಕೊಯ್ಲು ಹಾಗೂ ಮದ್ದು ಸಿಂಪಡನಾ ತರಬೇತಿ ಶಿಬಿರ ಆಯೋಜಿಸಿದ್ದು, ಮುಂದಿನ ದಿನದಲ್ಲಿ ನಾವೇ ಮುಂದಾಗಿ ರೈತರಿಗೆ ಕಾಲಕಾಲಕ್ಕೆ ಅಗತ್ಯವಿರುವ ಕೌಶಲ್ಯ ಪೂರ್ಣ ಕಾರ್ಮಿಕರನ್ನು ಕಂಪನಿ ವತಿಯಿಂದ ಕಳಿಸುವ ಪ್ರಯತ್ನವಿದೆ ಎಂದರು.
ಟಿ.ಆರ್.ಸಿ ಸೊಸೈಟಿಯ ನಿರ್ದೇಶಕರಾದ ವಿ ಎನ್ ಹೆಗಡೆ ಮೂಲೆಮನೆ ಮಾತನಾಡಿ, ಟಿಆರ್ಸಿ ಸೊಸೈಟಿಯ ಪ್ರೇರಣೆಯಿಂದ ತೋಟಗಾರ್ಸ್ ಘರೀನ್ ಗ್ರೂಪ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿಯನ್ನು ರಚಿಸಲಾಗಿದೆ. ಈ ಕಾಲದಲ್ಲಿ ಸಂಘಶಕ್ತಿಯಿಂದ ಮಾತ್ರ ಕೆಲಸವನ್ನು ಸುಲಭಗೊಳಿಸಲು ಸಾಧ್ಯ. ಕೇಂದ್ರ ಸರಕಾರದ ಸಹಕಾರದಿಂದ ಈ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ರಚಿಸಲಾಗಿದೆ. ಮುಂದಿನ ದಿನದಲ್ಲಿ ಕೃಷಿ ಸಂಬಂಧಿತ ಕಾರ್ಯ ಚಟುವಟಿಕೆಗಳನ್ನು ಮಾಡುವ ಎಲ್ಲ ಪ್ರಯತ್ನ ಈ ಕಂಪನಿಯಿಂದಾಗಲಿದೆ. ಗ್ರಾಮೀಣ ಭಾರತದ ಪರಿಕಲ್ಪನೆ ಸಾಕಾರಗೊಳಿಸುವಲ್ಲಿ ಇಂತಹ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿಯಿಂದ ಸಾಧ್ಯವಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದ ಉಮಾನಂದ ಭಟ್ಟ ಕೊಡ್ಲಳ್ಳಿ, ಕಳೆದ ಎರಡಕ್ಕೂ ಹೆಚ್ಚು ವರ್ಷಗಳಿಂದ ದೋಟಿ ಮೂಲಕ ಮದ್ದು ಸಿಂಪಡನೆ ಮತ್ತು ಕೊನೆಕೊಯ್ಲುಗಳನ್ನು ನಡೆಸಲಾಗಿದೆ. ಇದೇ ತಂತ್ರಜ್ಞಾನ ಅಂತಿಮವಲ್ಲ. ಕಾಲಕಾಲಕ್ಕೆ ಬದಲಾವಣೆ ನಡೆಯುತ್ತಲೇ ಇರುತ್ತದೆ. ಕಲಿಕೆಯಲ್ಲಿ ಶ್ರದ್ಧೆ ಇದ್ದರೆ ಮಾತ್ರ ಸಾಧನೆ ಸಾಧ್ಯ. ತಾಳ್ಮೆಯಿಂದ ಕೆಲಸ ನಿರ್ವಹಿಸಿದರೆ ಯಶಸ್ಸು ದೊರೆಯುತದೆ ಎಂದರು.
ಜಿ ಜಿ ಹೆಗಡೆ ಕುರುವಣಿಗೆ ಗ್ರೀನ್ ಗ್ರೂಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಹಾಗು ತರಬೇತಿ ಶಿಬಿರದ ಕುರಿತಾಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಡಿಕೆ ಸಸಿಗೆ ನೀರೆರೆಯುವ ಮೂಲಕ ಔಚಿತ್ಯಪೂರ್ಣವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವೇದಿಕೆಯಲ್ಲಿ ಟಿ.ಆರ್.ಸಿ ನಿರ್ದೇಶಕರಾದ ಜಿ ವಿ ಜೋಷಿ ಕಾಗೇರಿ, ವಿ ಪಿ ಬಲಸೆ, ಪ್ರೊಡ್ಯೂಸರ್ ಕಂಪನಿಯ ನಿರ್ದೇಶಕರಾದ ಶಿವಾನಂದ ಭಟ್ಟ ನಿಡಗೋಡು, ಶ್ರೀಧರ ಹೆಗಡೆ ಜಡ್ಡಿಮನೆ ಇದ್ದರು. ತೋಟಗಾರ್ಸ್ ಗ್ರೀನ್ ಗ್ರೂಫ್ ಕಂಪನಿಯ ಮುಖ್ಯಕಾರ್ಯನಿರ್ವಾಹಕ ಗುರುಪ್ರಸಾದ ಶಾಸ್ತ್ರಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳು ಅನುಭವ ಹಂಚಿಕೊಂಡರು. ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಕಂಪನಿ ವತಿಯಿಂದ ಪ್ರಮಾಣಪತ್ರ ನೀಡಲಾಯಿತು