ಶಿರಸಿ: ತಮ್ಮ 39 ವರ್ಷಗಳ ಸುದೀರ್ಘ ಸೇವೆಯಲ್ಲಿ 10 ವರ್ಷಗಳ ಕಾಲ ಪದೋನ್ನತ ಮುಖ್ಯಾಧ್ಯಾಪಕಿಯಾಗಿ ಅಜ್ಜೀಬಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ಡಿ.31ರಂದು ನಿವೃತ್ತರಾದ ತಾರಾ ರಾಮಚಂದ್ರ ಭಟ್ಟ ಇವರನ್ನು, ಬಿಇಓ ಕಚೇರಿ, ತಾಲೂಕಾ ಶಿಕ್ಷಕರ ಸಂಘ ಶಿರಸಿ, ಊರ ನಾಗರಿಕರು, ಅಜ್ಜೀಬಳ ಎಸ್‍ಡಿಎಂಸಿ ಹಾಗೂ ಶಿಕ್ಷಕ ವೃಂದದ ವತಿಯಿಂದ ಸನ್ಮಾನಿಸಿ ಬಿಳ್ಕೊಡಲಾಯಿತು.
ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದ ಗ್ರಾ.ಪಂ.ಉಪಾಧ್ಯಕ್ಷ ಪ್ರಶಾಂತ ಹೆಗಡೆ, ತಾವು ಎರಡು ವರ್ಷಗಳ ಕಾಲ ಎಸ್‍ಡಿಎಂಸಿ ಅಧ್ಯಕ್ಷರಾಗಿದ್ದ ವೇಳೆ ತಾರಾ ಭಟ್ಟರವರ ಕಾರ್ಯದಕ್ಷತೆ ಮತ್ತು ಸಂಘಟನೆ ಸ್ಮರಿಸುವಂಥಹುದು. ಶತಮಾನೋತ್ತರ ಬೆಳ್ಳಿಹಬ್ಬ ಕಾರ್ಯಕ್ರಮವು ಅಭೂತ ಪೂರ್ವವಾಗಿ ನೆರವೇರುವಲ್ಲಿ ಇವರ ಕೊಡುಗೆ ಅನನ್ಯವಾಗಿತ್ತು ಎಂದು ಶ್ಲಾಸಿದರು. ಪತ್ರಕರ್ತ ರಾಜು ಕಾನಸೂರು, ತಾರಾ ಭಟ್ಟರ ಸೇವೆಯನ್ನು ಸ್ಮರಿಸಿ ತಾರಾ ಭಟ್ಟರ ಅವಧಿಯಲ್ಲಿ ನಿರ್ಮಾಣಗೊಂಡ ಶಾಲೆಯ ಈ ಸಭಾಭವನಕ್ಕೆ ಅವಶ್ಯವಿರುವ ಮೈಕ್ ಸೆಟ್( ಸೌಂಡ ಬಾಕ್ಸ) ನೀಡುವುದಾಗಿ ಘೋಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‍ಡಿಎಂಸಿ ಅಧ್ಯಕ್ಷೆ ನೇತ್ರಾವತಿ ಗೌಡ ಮಾತನಾಡಿ, ತಾರಾ ಭಟ್ಟರು ನಮ್ಮ ಶಾಲೆಯಲ್ಲಿ ಸೇವೆ ಸಲ್ಲಿಸಿರುವುದು ನಮಗೆ ತುಂಬಾ ಹೆಮ್ಮೆ. ನಮಗೆ ಇನ್ನೂ ಇವರ ಸೇವೆಯ ಅಗತ್ಯವಿತ್ತು ಎಂದರು.
ಎಸ್‍ಡಿಎಂಸಿ ಮಾಜಿ ಅಧ್ಯಕ್ಷ ಮಹೇಶ ನಾಯ್ಕ ಮಾತನಾಡಿ, ತಾರಾ ಭಟ್ಟ ಇವರ ನಿಷ್ಕಲ್ಮಶ ಸೇವೆಯನ್ನು ಸ್ಮರಿಸಿ ಅವರ ಸಮಯ ಪಾಲನೆ, ಕರ್ತವ್ಯ ಪ್ರಜ್ಞೆಯನ್ನು ಕೊಂಡಾಡಿದರು. ರಾಜಾರಾಮ ಹೆಗಡೆ ಅಜ್ಜೀಬಳ ಇವರು, ತಾರಾ ಭಟ್ಟರ ಸಂಘಟನಾ ಕೌಶಲ್ಯ ಹಾಗೂ ಶಾಲೆಯನ್ನು ನಡೆಸಿಕೊಂಡು ಹೋಗುವ ಪರಿಯನ್ನು ಕೊಂಡಾಡಿದರು. ಸೋಮಶೇಖರವರು ಮಾತನಾಡಿ, ಮಕ್ಕಳಲ್ಲಿ ಅಥವಾ ಶಾಲೆಗೆ ಬರುವ ಪಾಲಕ/ಪೆÇೀಷಕರಲ್ಲಿ ಯಾವುದೇ ಭೇದ-ಭಾವ ತೋರದೆ ಹಸನ್ಮುಖಿಯಾಗಿದ್ದು, ಉತ್ತಮ ಶಿಕ್ಷಕಿಯಾಗಿ ಕಾರ್ಯ ಮಾಡಿದ್ದಾರೆ ಎಂದರು. ಸುಬ್ರಾಯ ನಾಯ್ಕ ಮಾತನಾಡಿ, ತಾರಾ ಭಟ್ಟರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು, ನಮ್ಮ ಶಾಲೆಯ ಕೀರ್ತಿ ಹೆಚ್ಚಿಸಿದೆ ಎಂದು ಬಣ್ಣಿಸಿದರು. ಗಣಪತಿ ನಾಯ್ಕ, ಚಂದ್ರ ಶೇಖರ ಮಡಿವಾಳ, ಎನ್‍ಎಸ್ ಭಟ್ಟ,ನಿವೃತ್ತ ಶಿಕ್ಷಕ ಡಿ ಎಚ್ ನಾಯಕ, ಸಹಶಿಕ್ಷಕರಾದ ನಾಗೇಶ ನಾಯ್ಕ, ಶ್ರೀಮತಿ ಜ್ಯೋತಿ ವೆರ್ಣೇಕರ, ಶ್ರೀಮತಿ ಸುಕನ್ಯಾ ಭಟ್ಟ ಮತ್ತು ಶ್ರೀಮತಿ ಶರಾವತಿ ನಾಯ್ಕ ಮಾತನಾಡಿದರು.
ಬಿಳ್ಕೊಂಡ ತಾರಾ ಭಟ್ಟ ಮಾತನಾಡಿ, ಇಲಾಖಾ ಅ„ಕಾರಿಗಳ ಸಹಕಾರ, ಊರನಾಗರಿಕರ, ಎಸ್‍ಡಿಎಂಸಿಯವರ ಹಾಗೂ ಸಹಶಿಕ್ಷಕರ ಸಹಕಾರದಿಂದ ನಾನು ನನ್ನ ಕರ್ತವ್ಯವನ್ನು ಯಾವುದೇ ಅಡೆತಡೆಗಳಿಲ್ಲದೆ ನಿಭಾಯಿಸಲು ಸಾಧ್ಯವಾಗಿದೆ ಎಂದು ಹೇಳುತ್ತ, ಶಿಕ್ಷಕ ವೃತ್ತಿಯಲ್ಲಿ ಪ್ರಾರಂಭದಿಂದ ಇಲ್ಲಿಯವರೆಗಿನ ವೃತ್ತಿ ಜೀವನವನ್ನು ನೆನಪಿಸಿಕೊಂಡು ಸಹಕಾರ ನೀಡಿದವರನ್ನು ಸ್ಮರಿಸಿದರು. ತಮ್ಮ ವೃತ್ತಿಯ ಸವಿನೆನಪಿಗಾಗಿ ಶಾಲೆಗೆ ಕಲರ್ ಪ್ರಿಂಟರ್ ದೇಣಿಗೆಯಾಗಿ ನೀಡಿದರು.
ತಾರಾ ಭಟ್ಟರವರ ಪತಿ ಶಿವರಾಮ ಹೆಗಡೆ ಮಾತನಾಡಿ, ಶಿಕ್ಷಣ ಇಲಾಖೆ ಇತರ ಇಲಾಖೆಗಳಿಗಿಂತ ಅಗ್ರಮಾನ್ಯ.ಊರನಾಗರಿಕರ, ಎಸ್‍ಡಿಎಂಸಿಯವರ ಹಾಗೂ ಮುದ್ದು ಮಕ್ಕಳ ವಿಶ್ವಾಸ ಹಾಗೂ ಅಪಾರ ಪ್ರೀತಿ ಗಳಿಸಿದ ತಾರಾ ಭಟ್ಟರ ಸೇವೆ ಧನ್ಯ ಎಂದರು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಪ್ರಭಾರಿ ಮುಖ್ಯಾಧ್ಯಾಪಕ ನಾಗೇಶ ನಾಯ್ಕ ಸ್ವಾಗತಿಸಿ ನಿರೂಪಿಸಿದರು. ಶಾಲಾ ಮಕ್ಕಳೆಲ್ಲ ಸೇರಿ ತಾರಾ ಭಟ್ಟರನ್ನು ಹಾಡಿನೊಂದಿಗೆ ಬಿಳ್ಕೊಟ್ಟರು. ಕೊನೆಯಲ್ಲಿ ನಾಗೇಶ ನಾಯ್ಕ ವಂದಿಸಿದರು.