ಶಿರಸಿ: ಎರಡನೇ ಅಲೆಯು ಮುಗಿಯುತ್ತಿದ್ದಂತೇ ಕರೋನಾ, ಕೋವಿಡ್ ಸಾಂಕ್ರಾಮಿಕ ಮೂರನೇ ಅಲೆಯಾಗಿ ಬರುತ್ತಿದೆ. ಇದನ್ನು ತಡೆಯಲು ದೈವಿಕ ಹಾಗೂ ಲೌಕಿಕ ಸೂತ್ರ ಅನುಸರಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಕಳಕಳಿಯ ಸಂದೇಶ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಶ್ರೀಗಳು, ಬೇರೆ ದೇಶಗಳಲ್ಲಿ ಕರೋನಾ ತೀವ್ರ ಸ್ವರೂಪಕ್ಕೆ ಹೋಗಿದೆ. ನಮ್ಮ ದೇಶದಲ್ಲಿ 3 ನೇ ಅಲೆ ಸ್ವಲ್ಪ ನಿಧಾನ ಹಂತದಲ್ಲಿದೆ. ನಮ್ಮ ದೇಶದಲ್ಲಿಯೂ ಮಹಾರಾಷ್ಟ್ರ, ದೆಹಲಿಗಳಲ್ಲಿ ತೀವ್ರ ಸ್ವರೂಪಕ್ಕೆ ಹೋಗುವ ಹಂತ ಕಂಡು ಬಂದಿದೆ ಎಂದು ಆತಂಕಿಸಿದ್ದಾರೆ. ಎರಡನೇ ಅಲೆ ಬಂದಾಗ ತುಂಬಾ ಅನಾಹುತವಾಗಿತ್ತು. ಎರಡನೇ ಅಲೆಯಲ್ಲಿ ಆದ ಗಂಭೀರ ಪರಿಣಾಮ ಮೂರನೇ ಅಲೆಯಲ್ಲಿ ಕಾಣುವಂತೆ ಆಗಬಾರದು. ಅದಕ್ಕಾಗಿ ದೇವರಲ್ಲಿ ಪ್ರಾರ್ಥನೆ ಮಾಡೋಣ. ಧ್ವನಂತರಿ ಸಹಸ್ರನಾಮ, ಧನ್ವಂತರಿ ಮೂಲ ಮಂತ್ರ ಜಪದ ಅನುಷ್ಠಾನ, ರುದ್ರ ಅನುಷ್ಠಾನ ಮತ್ತು ಮೃತ್ಯಂಜಯ ಜಪ, ಚಂಡಿಕಾ ಸಪ್ತಶತಿ ಪಾರಾಯಣ ಮತ್ತು ಲಲಿತಾ ಸಹಸ್ರನಾಮವನ್ನು ಉಪದೇಶ ಉಳ್ಳವರು ಮಾಡಬೇಕು. ಧನ್ವಂತರಿ ಸಹಸ್ರನಾಮ ಹಾಗೂ ಲಲಿತಾ ಸಹಸ್ರನಾಮವನ್ನು ಎಲ್ಲರೂ ಹೇಳಬಹುದು ಎಂದು ಸೂಚಿಸಿದ್ದಾರೆ.
ಸೂಚಿಸದ ಜಪವನ್ನು ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಜಪಗಳನ್ನು ಮಾಡಿ ಮಠಕ್ಕೆ ವರದಿ ನೀಡಬೇಕು ಎಂದೂ ಶ್ರೀಗಳು ತಿಳಿಸಿದ ಶ್ರೀಗಳು, ಈ ಪುಷ್ಯ ಮಾಸದ ಕೊನೆಯ ಒಳಗಾಗಿ ಹೆಚ್ಚು ಜಪಗಳನ್ನು ಮಾಡಬೇಕು. ಎಲ್ಲ ಶಿಷ್ಯರು ಭಕ್ತರು ವೈದಿಕರು, ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಪ ಅನುಷ್ಠಾನ ಮಾಡಬೇಕು ಎಂದೂ ಹೇಳಿದ್ದಾರೆ.ಸಮಾಜದ ಆರೋಗ್ಯ ಸುಧಾರಣೆಗೆ ದೇವರಲ್ಲಿ ಪ್ರಾರ್ಥಿಸಬೇಕು. ಲೌಕಿಕ ಎಚ್ಚರಿಕೆ ಕ್ರಮವನ್ನೂ ಅನುಸರಿಸುವುದು ಅತೀ ಅಗತ್ಯ, ಮಾಸ್ಕ್ ಧರಿಸುವುದು, ಹೆಚ್ಚು ಗುಂಪು ಸೇರದೇ ಅಂತರ ಕಾಪಾಡಿಕೊಳ್ಳುವುದು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದೂ ಸಂದೇಶದಲ್ಲಿ ವಿನಂತಿಸಿದ್ದಾರೆ.