ಶಿರಸಿ: ಇಲ್ಲಿನ ತೋಟಗಾರ್ಸ್ ಗ್ರೀನ್ ಗ್ರೂಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಹಾಗೂ ಟಿ.ಆರ್.ಸಿ ಶಿರಸಿ ಇವರ ಸಹಯೋಗದಲ್ಲಿ ಕಾರ್ಬನ್ ಫೈಬರ್ ದೋಟಿಯಲ್ಲಿ ಅಡಿಕೆ ಕೊನೆ ಕೊಯ್ಯುವ ಹಾಗೂ ಔಷಧ ಸಿಂಪಡಿಸುವ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಕಾರ್ಯಕ್ರಮವು ಜ.೭ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ತಾಲೂಕಿನ ಪುಟ್ಟನಮನೆಯ ಮೂಲೇಮನೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಆರ್.ಸಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ವಹಿಸಲಿದ್ದು, ತ್ಯಾಗಲಿ ಸೊಸೈಟಿ ಅಧ್ಯಕ್ಷ ಎನ್.ಬಿ. ಹೆಗಡೆ ಮತ್ತಿಹಳ್ಳಿ ಉದ್ಘಾಟಿಸುವರು. ತೋಟಗಾರ್ಸ್ ಗ್ರೀನ್ ಗ್ರೂಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಅಧ್ಯಕ್ಷ ಶ್ರೀಧರ ಹೆಗಡೆ, ಕಡವೆ, ಟಿ.ಆರ್.ಸಿ ನಿರ್ದೇಶಕ ಜಿ. ವಿ. ಜೋಶಿ ಕಾಗೇರಿ ಉಪಸ್ಥಿತರಿರುವರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸುವ ಪ್ರಗತಿಪರ ಕೃಷಿಕರಾದ ಉಮಾನಂದ ಭಟ್ಟ, ಕೊಡ್ಲಳ್ಳಿ ದೋಟಿ ಬಳಸಿ ಕೊನೆ ಕೊಯ್ಯುವ ಮತ್ತು ಮದ್ದು ಸಿಂಪಡಿಸುವುದರ ಕುರಿತು ಮಾಹಿತಿ, ತರಬೇತಿ ನೀಡುವರು.
ತೋಟಗಾರ್ಸ್ ಗ್ರೀನ್ ಗ್ರೂಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿಯು ಶಿರಸಿಯ ಟಿ.ಆರ್.ಸಿಯ ಪ್ರೇರಣೆಯಿಂದ ಆರಂಭಗೊಂಡ ರೈತ ಉತ್ಪಾದಕ ಸಂಸ್ಥೆಯಾಗಿದ್ದು, ಸ್ಥಳೀಯವಾಗಿ ರೈತರಿಗೆ ಅನುಕೂಲವಾಗುವಂತಹ ಯೋಚನೆ-ಯೋಜನೆ ಮತ್ತು ಕಾರ್ಯಾನುನಗಳ ಮೂಲಕ ಬಹುಮುಖದಲ್ಲಿ ರೈತರಿಗೆ ಸಹಕಾರಿಯಾಗುವ ಉದ್ದೇಶವನ್ನು ಹೊಂದಿದೆ. ಈ ದಿಶೆಯಲ್ಲಿ ಕೃಷಿ ಕೆಲಸದ ಅನುಕೂಲಕ್ಕಾಗಿ ಪ್ರಸ್ತುತ ಕೃಷಿ ಕಾರ್ಮಿಕರಿಗೆ ಕೊನೆ ಕೊಯ್ಯುವ ಹಾಗೂ ಮದ್ದು ಸಿಂಪಡಿಸುವ ಕೆಲಸಕ್ಕೆ ಆಧುನಿಕ ತಂತ್ರಜ್ಞಾನದ ಕೌಶಲ್ಯವನ್ನು ಒದಗಿಸುವ ಪ್ರಯತ್ನ ಮಾಡುತ್ತಿದೆಎಂದು ತಿಳಿಸಿದೆ.