ಅಹೋ ಸಾಹಜಿಕಂ ಪ್ರೇಮ ದೂರಾದಪಿ ವಿರಾಜತೇ
ಚಕೋರನಯನದ್ವಂದ್ವಮಾಹ್ಲಾದಯತಿ ಚಂದ್ರಮಾಃ ||
ಸಹಜವಾದ, ಕೃತ್ರಿಮತೆಯಿಲ್ಲದೆ, ಬೂಟಾಟಿಕೆಯದಲ್ಲದ ಪ್ರೇಮವು ದೂರದಿಂದಲೇ ಆದರೂ ಶೋಭಿಸುತ್ತದೆ. ಅದಕ್ಕೆ ತನ್ನ ಪ್ರೇಮದ ವಸ್ತುವಿನ ಸಾಮೀಪ್ಯವೇ ಇರಬೇಕೆಂದಿಲ್ಲ. ಉದಾಹರಣೆಗೆ ನೋಡಿ, ಚಂದ್ರಮ ಮತ್ತು ಚಕೋರ ಪಕ್ಷಿಯ ನಡುವಿನ ಆ ಪ್ರೇಮದ
ಕಾರಣಕ್ಕೆ ಅದೆಷ್ಟೇ ದೂರದಲ್ಲಿ ಚಂದ್ರಮನು ಎಂದೆಂದೂ ಕೈಗೆಟುಕದಂತಿದ್ದರೂ ಅವನನ್ನು ಕಂಡ ಕ್ಷಣ ಚಕೋರಪಕ್ಷಿಯ ಕಂಗಳು ಮಿನುಗುತ್ತವೆ. (ಚಂದ್ರ ಮತ್ತು ಚಕೋರಪಕ್ಷಿಗಳ ಸಂಬಂಧವು ಸಂಸ್ಕೃತವೂ ಸೇರಿದಂತೆ ಭಾರತೀಯ ಪಾರಂಪರಿಕ ಸಾಹಿತ್ಯಕಾರರ ಕವಿಸಮಯಗಳಲ್ಲೊಂದು. ಚಂದ್ರಮನ ಬೆಳದಿಂಗಳನ್ನೇ ಉಂಡು ಈ ಹಕ್ಕಿ ಬದುಕುತ್ತದೆನ್ನುವ ನಂಬುಗೆ ಕಾವ್ಯದ್ದು. ಹಾಗಾಗಿ ಚಕೋರವು ಕೃಷ್ಣಪಕ್ಷದಲ್ಲಿ ವಿರಹವನ್ನೂ ಶುಕ್ಲಪಕ್ಷದಲ್ಲಿ ಸಾಂತ್ವನವನ್ನೂ ಹೊಂದುತ್ತದೆ ಎಂಬ ನಂಬುಗೆಯಿದೆ)
ಶ್ರೀ ನವೀನ ಗಂಗೋತ್ರಿ