• Slide
    Slide
    Slide
    previous arrow
    next arrow
  • ಹದಗೆಟ್ಟ ಅರಬೈಲ್ ಘಟ್ಟ ರಸ್ತೆಗೆ ತೇಪೆ ಭಾಗ್ಯ; ಪ್ರಯಾಣಿಕರು ತುಸು ನಿರಾಳ

    300x250 AD

    ಯಲ್ಲಾಪುರ: ತಾಲೂಕಿನ ಅರಬೈಲ್ ಹಾಗೂ ಆರತಿಬೈಲ್ ಘಟ್ಟ ಪ್ರದೇಶದಲ್ಲಿ ಸಂಪೂರ್ಣ ಹದಗೆಟ್ಟ ರಾಷ್ಟ್ರೀಯ ಹೆದ್ದಾರಿಗೆ ಅಂತೂ ತೇಪೆ ಭಾಗ್ಯ ದೊರಕಿದೆ. ಹೆದ್ದಾರಿಯಲ್ಲಿನ ಹೊಂಡಗಳನ್ನು ಮುಚ್ಚುವ ಕಾರ್ಯವನ್ನು ಇಲಾಖೆ ಆರಂಭಿಸಿದೆ.


    ಆರತಿಬೈಲ್ ಘಟ್ಟದಲ್ಲಿ ಹಾಗೂ ಅರಬೈಲ್ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ ತೀರಾ ಹಾಳಾದ ಪರಿಣಾಮ ವಾಹನಗಳ ಸವಾರರು ತೊಂದರೆ ಅನುಭವಿಸುವಂತಾಗಿತ್ತು. ರಸ್ತೆ ಹದಗೆಟ್ಟ ಕಾರಣದಿಂದ ಪ್ರತಿನಿತ್ಯ 2-3 ವಾಹನಗಳು ಪಲ್ಟಿಯಾಗುವುದು, ಡಿಕ್ಕಿ ಇತ್ಯಾದಿ ಅವಘಡಗಳು ನಡೆಯುವುದು ಸಾಮಾನ್ಯವಾಗಿತ್ತು. ಇದರಿಂದ ಪದೇ ಪದೇ ಟ್ರಾಫಿಕ್ ಸಮಸ್ಯೆ ಉಂಟಾಗುವುದರಿಂದ ಪ್ರಯಾಣಿಕರು ಹೈರಾಣಾಗುವಂತಾಗಿತ್ತು. ಇದೀಗ ಹೆದ್ದಾರಿಗೆ ಇಲಾಖೆ ತೇಪೆ ಹಾಕಲು ಮುಂದಾಗಿರುವುದು ಅಲ್ಪಮಟ್ಟಿಗೆ ಸವಾರರಿಗೆ ಅನುಕೂಲವಾಗಬಹುದಾಗಿದೆ.

    300x250 AD


    ವಾಹನ ಸವಾರರ ಸಹಕಾರ ಕೋರಿದ ಇಲಾಖೆ: ದುರಸ್ತಿ ಕಾಮಗಾರಿ ನಡೆಯುವ ವೇಳೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಆದರೂ ರಸ್ತೆಯ ಎರಡೂ ಕಡೆಗಳಲ್ಲಿ ನಿಂತ ವಾಹನಗಳನ್ನು ಸರತಿಯಂತೆ ಸಂಚರಿಸಲು ಅವಕಾಶ ನೀಡಿ ಟ್ರಾಫಿಕ್ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದೇ ಸಮಯದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಾರ್ ಗಳ ಚಾಲಕರು ವಾಹನಗಳ ಸಾಲಿನ ಮಧ್ಯೆ ತಮ್ಮ ವಾಹನ ತಂದು ನಿಲ್ಲಿಸಿ, ಇನ್ನಷ್ಟು ಟ್ರಾಫಿಕ್ ಸಮಸ್ಯೆ ಉಂಟಾಗಲು ಕಾರಣರಾಗುತ್ತಿರುವುದು ಹೆದ್ದಾರಿ ಇಲಾಖೆಯ ಸಿಬ್ಬಂದಿಗೆ ತಲೆನೋವಾಗಿದೆ. ರಸ್ತೆ ಕಾಮಗಾರಿಗೂ ಇದು ಸಮಸ್ಯೆಯಾಗುತ್ತಿದ್ದು, ಟ್ರಾಫಿಕ್ ಸಮಸ್ಯೆ ಹೆಚ್ಚಾಗಲೂ ಇದು ಕಾರಣವಾಗುತ್ತಿದೆ.


    ಕೇವಲ ಕಾಮಗಾರಿ ನಡೆಯುವ ವೇಳೆ ಮಾತ್ರವಲ್ಲ, ಯಾವುದಾದರೂ ಅಪಘಾತಗಳು ಸಂಭವಿಸಿದಾಗಲೂ ಬಸ್ ಹಾಗೂ ಕಾರ್ ಗಳ ಚಾಲಕರು ಇದೇ ರೀತಿ ಮಾಡುತ್ತಾರೆ. 10-15 ನಿಮಿಷಗಳ ಕಾಲವೂ ಕಾಯುವ ವ್ಯವಧಾನ ತೋರುವುದಿಲ್ಲ ಎಂಬ ಅಸಮಾಧಾನ ಹೆದ್ದಾರಿ ಇಲಾಖೆಯ ಅಧಿಕಾರಿಗಳದಾಗಿದೆ. ಹೆದ್ದಾರಿ ದುರಸ್ತಿ ಕಾಮಗಾರಿ ಮುಗಿಯುವವರೆಗಾದರೂ ಈ ರೀತಿ ಸಮಸ್ಯೆ ಆಗದಂತೆ ವಾಹನ ಸವಾರರು ಸಹಕರಿಸಬೇಕೆಂದು ಅವರು ವಿನಂತಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top