ಕಾರವಾರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅವುಗಳನ್ನು ಅನುಷ್ಠಾನಗೊಳಿಸಲು ಗ್ರಾಮ ಪಂಚಾಯತಿ, ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ನೀಡಲಾಗಿರುವ ನಿಗದಿತ ಗುರಿಯನ್ನು ಸಮಯಕ್ಕೆ ಸರಿಯಾಗಿ ಸಾಧಿಸಬೇಕು ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ, ಅನುಷ್ಠಾನ ಇಲಾಖೆಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ನರೇಗಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಹೊಂಡ, ಎರೆಹುಳು ಗೊಬ್ಬರ ತೊಟ್ಟಿ, ಕೃಷಿ ಬಾವಿ, ಬದು ನಿರ್ಮಾಣ, ಅರಣ್ಯ ಟ್ರಂಚ್, ನರ್ಸರಿ, ರೇಷ್ಮೆ ಬೆಳೆ, ರಸ್ತೆ ನಿರ್ಮಾಣ, ಸಾರ್ವಜನಿಕ ಕೆರೆ, ಬಾವಿ, ಶೌಚಾಲಯ, ಬಚ್ಚಲು ಗುಂಡಿ ನಿರ್ಮಾಣದಂತ ಕಾಮಗಾರಿಗಳನ್ನು ಕೈಗೊಂಡು ಮಾನವ ದಿನ ಸೃಜನೆಗೆ ನಿಗದಿತ ಗುರಿಯನ್ನು ನೀಡಲಾಗಿದೆ.
ಆದರೆ ಅನುಷ್ಠಾನ ಇಲಾಖೆಗಳು ಸಮಯಕ್ಕೆ ಸರಿಯಾಗಿ ಕಾಮಗಾರಿ ನಡೆಸಿ ನಿಗದಿತ ಗುರಿ ಸಾಧಿಸುವಲ್ಲಿ ವಿಳಂಬ ಮಾಡುತ್ತಿವೆ.ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಜಿಲ್ಲೆಗೆ ನೀಡಿದ ನಿಗದಿತ ಗುರಿ ಸಾಧನೆಗೆ ಈ ರೀತಿ ವಿಳಂಬವಾಗುವುದನ್ನು ಸಹಿಸಲು ಸಾಧ್ಯವಿಲ್ಲ. ಆದಷ್ಟು ಬೇಗ ಎಲ್ಲ ಅನುಷ್ಠಾನ ಇಲಾಖೆಗಳು ತಮಗೆ ನೀಡಿರುವ ಗುರಿಯನ್ನು ಸಂಪೂರ್ಣವಾಗಿ ಸಾಧಿಸಬೇಕು. ಇಲ್ಲವಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಂತರದಲ್ಲಿ ಕೊಳಚೆ ಮುಕ್ತ ಗ್ರಾಮ, ಶಾಲಾ ಶೌಚಾಲಯ, ಆಟದ ಮೈದಾನ ನಿರ್ಮಾಣ, ಬಚ್ಚಲು ಗುಂಡಿ ನಿರ್ಮಾಣ, ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ಸಭೆಯಲ್ಲಿ ಅರಣ್ಯ, ಕೃಷಿ, ಸಾಮಾಜಿಕ ಅರಣ್ಯ ಹಾಗೂ ಎಲ್ಲ ತಾಲೂಕು ಪಂಚಾಯತ್‍ನ ಸಹಾಯಕ ನಿರ್ದೇಶಕರು, ಎಡಿಪಿಸಿ, ತಾಂತ್ರಿಕ ಸಹಾಯಕರು, ಎಂಐಎಸ್, ಐಇಸಿ ಸಂಯೋಜಕರು ಉಪಸ್ಥಿತರಿದ್ದರು.