ಕಾರವಾರ: ಕಲ್ಲೂರು ಎಜ್ಯುಕೇಶನ್ ಟ್ರಸ್ಟ್‌ನ 15ನೇ ವಾರ್ಷಿಕೋತ್ಸವವು ಕುಟುಂಬ ಸಂಗಮ ಸಮಾಜ ಸಂಭ್ರಮದೊಂದಿಗೆ ಶಿವಾಜಿ ವಿದ್ಯಾಮಂದಿರದಲ್ಲಿ ಸೋಮವಾರ ನಡೆಯಿತು.
ಕಾರ್ಯಕ್ರಮವನ್ನು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಗಜಾನನ ನಾಯಕ ಅವರು ಉದ್ಘಾಟಿಸಿದರು. ನಂತರ ಮಾತನಾಡಿ, ಗಡಿ ಭಾಗದ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಹೀಗಾಗಿ ಇದನ್ನು ಕನ್ನಡ ನಾಡಿನ ಹೆಬ್ಬಾಗಿಲು ಎಂದು ಹೇಳಬಹುದು. ಕಲ್ಲೂರು ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮ ಔಚಿತ್ಯ ಪೂರ್ಣವಾಗಿದೆ ಎಂದರು.
ಈ ಸಂದರ್ಭದಲ್ಲಿ ಪದಶ್ರೀ ಪ್ರಶಸ್ತಿ ಪಡೆದ ಹರೇಕಳ ಹಾಜಬ್ಬನವರಿಗೆ ವಿದ್ಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸನ್ಮಾನ ಕಾರ್ಯಕ್ರಮಕ್ಕೆ ಹಾಜಬ್ಬ ಅವರು ಆಗಮಿಸಿದ್ದರು. ಆದರೆ ತುರ್ತಾಗಿ ತೆರಳಬೇಕಾಗಿದ್ದರಿಂದ ರವಿವಾರವೇ ಅವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪಿ.ವಿ. ಪ್ರಜೀತರವರು ಹಾಜಬ್ಬ ಅವರ ಸ್ವಂತ ಉಪಯೋಗಕ್ಕಾಗಿ 50 ಸಾವಿರ ರೂ. ಚೆಕ್ ಹಾಗೂ ನರೇಂದ್ರ ದೇಸಾಯಿ ಅವರು 25,000 ರೂ. ಚೆಕ್ ನೀಡಿ ಗೌರವಿಸಿದರು. ಸಮಾಜ ಸೇವೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ ಸ್ಯಾಮಸನ್ ಡಿಸೋಜಾ ಅವರಿಗೆ ಸಮಾಜ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿವಾಜಿ ವಿದ್ಯಾಮಂದಿರದ ಮುಖ್ಯಾಧ್ಯಾಪಕ ದಿನೇಶ ಗಾಂವಕರ್ ಅವರಿಗೆ ಗುರು ಶ್ರೇಷ್ಠ, ಪ್ರಶಸ್ತಿ ಹಾಗೂ ಶಿಕ್ಷಕ ಗಣೇಶ ಬಿಷ್ಠಣ್ಣನವರ್ ಅವರಿಗೆ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಅಭಿನಂದನಾ ಪತ್ರ ನೀಡಿ, ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು. ಕಲ್ಲೂರು ಎಜ್ಯುಕೇಶನ್ ಟ್ರಸ್ಟನ ನಿರ್ದೇಶಕ ಡಾ. ಕೌಸರ್ ಬಾನು ಮತ್ತು ಪ್ರೊ. ಶಿಫಾನಾ ಬೇಗಂ ಅವರಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು. ಡಿಡಿಪಿಐ ಹರೀಶ್ ಗಾಂವಕಾರ್ ಕಲ್ಲೂರು ಎಜ್ಯುಕೇಷನ್ ಟ್ರಸ್ಟ್‌ನ 15ನೇ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಕುಡ್ತರಕರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಅಧ್ಯಕ್ಷತೆಯನ್ನು ಶಾಲೆಯ ಕಾರ್ಯದರ್ಶಿ, ನ್ಯಾಯವಾದಿ ಸಂಜಯ ಸಾಳುಂಕೆ ವಹಿಸಿದರು.
ದಿನಕರ ಕಲಾನಿಕೇತನ ಸಂಗೀತ ಶಾಲೆ ಕಾರವಾರದ ಶಿಕ್ಷಕ ಮಾರುತಿ ನಾಯ್ಕ ಹಾಗೂ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಸಂಸ್ಥಾಪಕರಾದ ಇಬ್ರಾಹಿಮ್ ಕಲ್ಲೂರು ಎಜ್ಯುಕೇಶನ್ ಟ್ರಸ್ಟ್ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಿ, ಸ್ವಾಗತಿಸಿದರು. ಶಿಕ್ಷಕ ಗಣೇಶ್ ಭಿಷ್ಠಣ್ಣನವರ ನಿರೂಪಿಸಿ, ವಂದಿಸಿದರು. ವೇದಿಕೆಯಲ್ಲಿ ಮಾಜಿ ಶಾಸಕ ಗಂಗಾಧರ್ ಭಟ್ಟ್, ಕ್ಷೇತ್ರಶಿಕ್ಷಣಾಧಿಕಾರಿ ಶಾಂತೇಶ್ ನಾಯಕ, ಪಿ.ಡಿ.ಓ ವಿದ್ಯೇಶ್ವರಿ ನಾಯ್ಕ, ಗ್ರಾಪಂ ಉಪಾಧ್ಯಕ್ಷ ಶ್ಯಾಮ ನಾಯ್ಕ, ಕಾರವಾರ ಮಿರರ್ ಪತ್ರಿಕೆಯ ಎಂ.ಪಿ.ಕಾಮತ್, ಲ. ಹನಿಫ್ ಮುಲ್ಲಾ, ಲ.ಅಲ್ತಾಫ್ ಶೇಖ್, ಲಯನ್ ಮಂಜುನಾಥ್ ಪವಾರ, ಲೋಕಮಾನ್ಯ ಬ್ಯಾಂಕಿನ ವ್ಯವಸ್ಥಾಪಕ ಮಹೇಂದ್ರ ನಾಯ್ಕ್ ಮತ್ತು ಹಿರಿಯರಾದ ನಾರಾಯಣ ದೇಸಾಯಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಲ.ಶಶಿಧರ್ ಮಾಸೂರ್‌ಕರ್, ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಕಸಾಪ ರಾಮಾ ನಾಯ್ಕ್, ಬಾಬು ಶೇಖ್, ಮತ್ತು ವಿದ್ಯಾರ್ಥೀ ಒಕ್ಕೂಟದ ರಾಘು ನಾಯ್ಕ, ಗ್ರಾ.ಪಂ. ಸದಸ್ಯರಾದ ಅಶ್ವಿನಿ ಮಾಳ್ಸೆಕರ್, ತನ್ವಿ ನಾಯ್ಕ್, ಕಲಾವಿದ ವಸಂತ ಬಾಂದೇಕರ್, ಇಂಜಿನಿಯರ್ ಗಿರೀಶ್ ದೇಸಾಯಿ, ನಿವೃತ್ತ ಮುಖ್ಯಾಧ್ಯಾಪಕ ಪಿ.ಎಸ್.ರಾಣೆ ಹಾಗೂ ಇನ್ನಿತರು ಇದ್ದರು.