• Slide
    Slide
    Slide
    previous arrow
    next arrow
  • ಜನತೆಗೆ ಸ್ವಚ್ಛತೆ ಜಾಗೃತಿಯ ಹೆಚ್ಚಿನ ಅರಿವಿರಲಿ; ಡಿಸಿ ಮುಲ್ಲೈ ಮುಗಿಲನ್

    300x250 AD

    ಕಾರವಾರ: ನಮ್ಮ ಜೀವನದಲ್ಲಿ ಸ್ವಚ್ಛತೆ ಪರಂಪರಾಗತವಾಗಿ ಬಂದಿದೆ. ಆದರೂ ಕೂಡ ಅದರ ಮಹತ್ವದ ಬಗ್ಗೆ ನಮಗೆ ಅರಿವಿಲ್ಲ. ಸ್ವಚ್ಛತೆಯ ಚಿಂತನೆ ನಮ್ಮ ಮನೆಯ ಹೊಸ್ತಿಲಿಗೇ ಸೀಮಿತವಾಗಿದೆ. ಜನರಲ್ಲಿ ಪರಿಸರ-ಸ್ವಚ್ಛತೆಯ ಜಾಗೃತಿ ಮೂಡಲು ಪಹರೆಯಂಥ ಬಳಗದಿಂದ ಮಾತ್ರ ಸಾಧ್ಯ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.


    ಇಲ್ಲಿನ ವಾರ್ಷಿಪ್ ಮ್ಯೂಸಿಯಂ ಬಳಿ ಸೋಮವಾರ ಆಯೋಜಿಸಿದ್ದ 7ನೇ ವರ್ಷದ ಸ್ವಚ್ಛತಾ ಮಹೋತ್ಸವ ಕಾರ್ಯಕ್ರಮದಲ್ಲಿ ಮೇಜರ್ ದಿ.ರಾಮಾ ರಾಘೋಬ ರಾಣೆ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಾದೇವ ವೇಳಿಪ್ ಅವರೊಂದಿಗೆ ವಾರ್ಷಿಪ್ ಹಿಂಬದಿಯಲ್ಲಿದ್ದ ಸುರಹೊನ್ನೆ ಮರಕ್ಕೆ ನೀರೆರೆದು, ಮಾಲಾರ್ಪಣೆ ಮಾಡಿ ವಿಶೇಷವಾಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಸ ಮತ್ತು ಸ್ವಚ್ಛತೆ ಎನ್ನುವುದು ಆಸಕ್ತಿಕರ ವಿಷಯ. ಇದು ಕೇವಲ ಕೆಲಸವಲ್ಲ, ನಮ್ಮ ಜೀವನಶೈಲಿ. ಸ್ವಚ್ಛತೆ ಎನ್ನುವುದು ಮನಸ್ಥಿತಿ. ಸ್ವಚ್ಛ ಭಾರತ ಅಭಿಯಾನದ ಅವಶ್ಯಕತೆ ಭಾರತಕ್ಕೆ ಮಾತ್ರ ಇದೆಯಾ. ವಿದೇಶಗಳಲ್ಲಿ ಸ್ವಚ್ಛತೆ ಇದೆ ಎಂದಾದರೆ ಭಾರತೀಯರಿಗೆ ಸ್ವಚ್ಛತೆ ಗೊತ್ತಿಲ್ಲವಾ ಎಂಬ ಪ್ರಶ್ನೆಯೂ ಮೂಡುತ್ತದೆ. ಆದರೆ, ಭಾರತೀಯರಿಗಿಂತ ಸ್ವಚ್ಛವಿರುವವರು ಯಾರೂ ಇಲ್ಲ ಎಂದರು.


    ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯುಳ್ಳ ನಗರಗಳ ವಿಭಾಗದಲ್ಲಿ ಕಾರವಾರ ರಾಜ್ಯದಲ್ಲಿ ಮೊದಲನೇ ರ್ಯಾಂಕ್, ರಾಷ್ಟ್ರದಲ್ಲಿ ಆರನೇ ರ್ಯಾಂಕ್ ಪಡೆದಿದೆ. ಇದು ಸಾಮಾನ್ಯ ವಿಚಾರವಲ್ಲ. ಇದು ಒಂದೇ ಬಾರಿ ಆಗುವಂಥದ್ದೂ ಅಲ್ಲ. 2013- 14ರಲ್ಲಿ ನಮ್ಮ ರ್ಯಾಂಕ್ 100ರ ಮೇಲಿತ್ತು. ಈಗ ನಾವು 1ರಿಂದ 12ನೇ ರ್ಯಾಂಕ್‍ನ ಒಳಗೆ ಬರುತ್ತಿದ್ದೇವೆಂದರೆ ಅದಕ್ಕೆ ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ. ಸಾರ್ವಜನಿಕರು ಮನಸ್ಥಿತಿ ಬದಲಿಸಿಕೊಳ್ಳಬೇಕು. ಪಹರೆ ವೇದಿಕೆ ಕೇವಲ ಕಾರವಾರಕ್ಕೆ ಸೀಮಿತವಾಗದೆ ಜಿಲ್ಲೆಯಾದ್ಯಂತ ಸ್ವಚ್ಛತಾ ಕ್ರಾಂತಿಯಂತೆ ಹಬ್ಬಿರುವುದು ಹೆಮ್ಮೆಯ ವಿಚಾರ ಎಂದರು.


    ನಗರಸಭೆಯ ಡಾ.ನಿತಿನ್ ಪಿಕಳೆ ಮಾತನಾಡಿ, ನಗರ ಸ್ವಚ್ಛತೆಗೆ ಪಹರೆ ವೇದಿಕೆಯಂಥ ಸಂಘಟನೆಗಳೂ ಸೇರಿದಂತೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು.


    ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದ ಪಹರೆಯ ಸಂಸ್ಥಾಪಕ ಅಧ್ಯಕ್ಷ ನಾಗರಾಜ ನಾಯಕ, ಕೃಷಿ-ಪರಿಸರ ಇತ್ಯಾದಿ ಸಾಮಾಜಿಕ ಕಾರ್ಯಕ್ಕಾಗಿ ಪಹರೆಯ ತಂಡವನ್ನು 2013ರಲ್ಲೇ ಸಂಘಟಿಸಿದ್ದೆವು. ಆದರೆ 2015ರ ಇದೇ ದಿನ (ಜನವರಿ 03) ಅಂದಿನ ಜಿಲ್ಲಾಧಿಕಾರಿ ಉಜ್ವಲ್‍ಕುಮಾರ್ ಘೋಷ್ ಅವರು ವೇದಿಕೆ ಮೂಲಕ ಆಯೋಜಿಸಿದ್ದ ಸ್ವಚ್ಛತಾ ಕಾರ್ಯವನ್ನು ಕಾರವಾರದಲ್ಲಿ ಉದ್ಘಾಟಿಸಿದ್ದರು. ಅಂದು ಶನಿವಾರವಾಗಿತ್ತು. ಅಂದಿನಿಂದ ಪ್ರತಿ ಶನಿವಾರ ಸ್ವಚ್ಛತಾ ಕಾರ್ಯ ನಡೆಸಬೇಕೆಂದು ಸಮಾನ ಮನಸ್ಕರು ನಿರ್ಧರಿಸಿದ್ದೆವು. ಆದರೆ ಅಂದು ಈ ಅಭಿಯಾನ ಏಳು ವರ್ಷಗಳವರೆಗೆ ನಿರಂತರವಾಗಿ ಸಾಗುತ್ತದೆ. ಯಶಸ್ಸು ತಂದುಕೊಂಡುತ್ತದೆ ಎಂದು ಊಹಿಸಿಯೂ ಇರಲಿಲ್ಲ. ಕಸದಿಂದ ದೂರವುಳಿಯುವುದು ಸ್ವಚ್ಛತೆಯಲ್ಲ, ಕಸವನ್ನು ನಿವಾರಿಸುವುದು ಸ್ವಚ್ಛತೆಯೆಂಬ ಧೇಯವನ್ನಿಟ್ಟುಕೊಂಡು ಈ ವೇದಿಕೆಯಡಿ ಒಂದುಗೂಡಿದ್ದ ಸಮಾನ ಮನಸ್ಕರು, ಯಾವುದೇ ಪಕ್ಷ- ಜಾತಿಯ ಭೇದ- ಭಾವ, ಹಮ್ಮು-ಬಿಮ್ಮುಗಳಿಲ್ಲದೆ ತಂಡವನ್ನು ಕಟ್ಟಿಕೊಂಡು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡು 366 ವಾರಗಳನ್ನು ಪೂರೈಸಿದ್ದೇವೆ ಎಂದು ಹೆಮ್ಮೆಯಿಂದ ನುಡಿದರು.

    300x250 AD


    ರಾಜ್ಯ ಪ್ರಶಸ್ತಿ ಪುರಸ್ಕೃತ ಮಹಾದೇವ ವೇಳಿಪ್ ಅವರು ಕಾರ್ಯಕ್ರಮದಲ್ಲಿ ಕೊಂಕಣಿ ಜಾನಪದ ಗೀತೆಯೊಂದನ್ನು ಹಾಡಿ ಜನಮನ ಗೆದ್ದರು. ಗಾಯಕಿ ಮೀನಾಕ್ಷಿ ಪಾಟೀಲ್ ಅವರ ವೈಷ್ಣವ ಜನತೋ ಪ್ರಾರ್ಥನಾಗೀತೆಯಿಂದ ಆರಂಭವಾದ ಕಾರ್ಯಕ್ರಮದಲ್ಲಿ ಸ್ವಚ್ಛತಾ ಮಹೋತ್ಸವದ ಗೌರವಾಧ್ಯಕ್ಷೆ ಪ್ರಕಾಶ್ ಕೌರ್ ವಂದನಾರ್ಪಣೆಗೈದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಟಿ.ಬಿ.ಹರಿಕಾಂತ ನಿರೂಪಿಸಿದರು. ನಗರಸಭೆಯ ಉಪಾಧ್ಯಕ್ಷ ಪ್ರಕಾಶ್ ಪಿ.ನಾಯ್ಕ ಇದ್ದರು.


    ಸ್ವಚ್ಛತೆ ಕಾಯ್ದುಕೊಂಡ ಅಂಗಡಿಗಳ ಮಾಲೀಕರಿಗೆ ಈ ವೇಳೆ ಪ್ರಶಸ್ತಿ ಫಲಕ, ಸನ್ಮಾನದ ಜೊತೆಗೆ ಕಸದ ಬುಟ್ಟಿಗಳನ್ನವಿತರಿಸಲಾಯಿತು. ಪಹರೆಯ ಈ ಹಿಂದಿನ ಅವಧಿಗಳಲ್ಲಿ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ರಮೇಶ ಗುನಗಿ, ಕೆ.ಡಿ.ಪೆಡ್ನೇಕರ್, ಸದಾನಂದ ಮಾಂಜ್ರೇಕರ್ ಅವರಿಗೂ ಸನ್ಮಾನಿಸಿ ಗೌರವಿಸಲಾಯಿತು.


    ಕಾರವಾರ ನಗರಸಭೆಯ ಮಹಿಳಾ ಸ್ವಚ್ಛಾತಾಕರ್ಮಿಗಳಿಗೆ ಪಹರೆಯ ಮಹಿಳಾ ಸದಸ್ಯರು ಉಡಿ ತುಂಬಿದರು. ಅಭಿನಂದನಾ ಪ್ರಮಾಣಪತ್ರವನ್ನೂ ಈ ವೇಳೆ ನೀಡಲಾಯಿತು. ವಿವಿಧ ಭಾಗಗಳ ಪಹರೆ ಘಟಕಗಳಿಗೆ ಸ್ವಚ್ಛತಾ ಕಾರ್ಯಕ್ಕಾಗಿ ತಲಾ ಎರಡು ಬುಟ್ಟಿ ಹಾಗೂ ಒಂದು ಗುದ್ದಲಿ ಹಸ್ತಾಂತರಿಸಲಾಯಿತು.


    ಹಲವರಿಗೆ ಸನ್ಮಾನ: ಪಹರೆ ವೇದಿಕೆಯಿಂದ ರಾಜ್ಯ ಪ್ರಶಸ್ತಿ ಪುರಸ್ಕøತ ಮಹಾದೇವ ವೇಳಿಪ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ನಗರಸಭೆಯ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಕಾರ್ಯಕ್ರಮದ ಗೌರವ ಅಧ್ಯಕ್ಷೆ ಪ್ರಕಾಶ್ ಕೌರ್ ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top