ಸಿದ್ದಾಪುರ: ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಭಗವದ್ಗೀತೆ ಸೇರ್ಪಡೆಯಾಗಬೇಕೆಂಬ ನಮ್ಮ ಆಗ್ರಹಕ್ಕೆ ಈಗ ಸಮಯ ಕೂಡಿ ಬಂದಂತಿದೆ. ಈ ಕುರಿತು ದೇಶದಲ್ಲಿ ಹೊಸ ಚಿಂತನೆ ನಡೆಯುತ್ತಿರುವುದು ಶ್ಲಾಘನೀಯ. ಸರ್ಕಾರ ಇದನ್ನು ಪ್ರತಿಕೂಲ ವಾತಾವರಣದಲ್ಲಿಯೇ ಜಾರಿಗೆ ತರಬೇಕು. ಯಾರೂ ಇದನ್ನು ಆಕ್ಷೇಪಣೆ ಮಾಡುವುದಿಲ್ಲ ಎಂದು ಸೋಂದಾ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಹೆಗ್ಗರಣಿಯ ಶಿಕ್ಷಣ ಸೇವಾ ಸಮಿತಿ, ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಹೆಗ್ಗರಣಿ, ಷಷ್ಟಿ ಪೂರಣ ಮಹೋತ್ಸವ ಸಮಿತಿ ಇವರ ಸಂಯುಕ್ತ ಸಹಕಾರದಲ್ಲಿ ನೂತನವಾಗಿ ನಿರ್ಮಿಸಿದ ಸಂಸ್ಥಾಪಕರ ಸ್ಮಾರಕ ಮಹಾಧ್ವಾರದ ಶಿಲಾ ಫಲಕದ ಅನಾವರಣ ಹಾಗೂ ಅನ್ನಪೂರ್ಣ ಸಭಾಭವನದ ಹಸ್ತಾಂತರ(ನಾಗರಕಟ್ಟೆ ಸಹೋದರರಿಂದ) ಮತ್ತು ಉದ್ಘಾಟನೆ ನೆರವೇರಿಸಿ ಸೋಮವಾರ ಅವರು ಆಶೀರ್ವಚನ ನೀಡಿದರು. ಮಕ್ಕಳ ಪರಿಪೂರ್ಣವಾದ ವ್ಯಕ್ತಿತ್ವ ನಿರ್ಮಾಣಕ್ಕೆ ಶಿಕ್ಷಣ ಅವಶ್ಯ. ಭಗವದ್ಗೀತೆ ಪಠ್ಯದಲ್ಲಿ ಬಂದರೆ ಪರಿಪೂರ್ಣವಾದ ಶಿಕ್ಷಣ ಸಿಗುವುದರ ಜತೆಗೆ ಉತ್ತಮ ವ್ಯಕ್ತಿಯಾಗಿ ಜೀವನ ನಡೆಸಲು ಸಾಧ್ಯ. ನಮ್ಮ ದೇಶದಲ್ಲಿನ ವಿದ್ಯೆ ಮತ್ತು ಧರ್ಮ ಇದ್ದ ಹಾಗೇ ಭೇರೆ ಯಾವ ದೇಶದಲ್ಲಿಯೂ ಇಲ್ಲ. ಧರ್ಮ ಮತ್ತು ವಿದ್ಯೆಯನ್ನು ಹಿರಿಯರು ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿದ್ದಾರೆ. ಯುವಕ-ಯುವತಿಯರು ನಮ್ಮ ಸಂಸ್ಕಾರದಿಂದ ದೂರವಾಗುತ್ತಿದ್ದಾರೆ. ಅದಕ್ಕಾಗಿ ಭಗವದ್ಗೀತೆ ಶಿಕ್ಷಣದಲ್ಲಿ ಸೇರ್ಪಡೆ ಆಗಬೇಬೇಕು ಎಂದು ಆಗ್ರಹಿಸಿದರು.
ಗೋಪಾಲಜಿ ಅವರು ಅನೇಕ ವರ್ಷಗಳಿಂದ ದೇಶ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಐತಿಹಾಸಿಕ ರಾಮ ಮಂದಿರ ನಿರ್ಮಾಣದ ಉಸ್ತುವಾರಿಯಲ್ಲಿ ಇರುವುದು ಹೆಮ್ಮೆಯ ಸಂಗತಿ. ಹೊಸ್ತೋಟ ನಾಗರಕಟ್ಟೆಯ ಕುಟುಂಬ ಉತ್ತಮ ಕಾರ್ಯ ಮಾಡಿದೆ ಎಂದು ಶ್ರೀಗಳು ನುಡಿದರು.
ಅಧ್ಯಕ್ಷತೆವಹಿಸಿದ್ದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಸಭಾಭವನ ಇರುವುದು ಕೇವಲ ಮನರಂಜನೆ ಕಾರ್ಯ ಮಾಡುವುದಕ್ಕಾಗಿ ಅಲ್ಲ. ವೈಚಾರಿಕ ಚಿಂತನೆಗಳು ನಡೆಯುವಂತಾಗಬೇಕು. ಯುವ ಪೀಳಿಗೆಗೆ ಉತ್ತಮ ಶಿಕ್ಷಣ ಸಿಗುವಂತಾಗಬೇಕು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ ಎಲ್ಲ ಅಭಿವೃದ್ಧಿ ಕಾರ್ಯ ನಡೆಯಬೇಕಾದರೆ ಸರ್ಕಾರದೊಂದಿಗೆ ಸಮಾಜ ಮತ್ತು ಕಂಪನಿಗಳು ಸಹಕಾರ ನೀಡಬೇಕು ಎಂದು ಹೇಳಿದರು.
ವಿಶ್ವ ಹಿಂದೂ ಪರಷತ್‍ನ ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿ ಗೋಪಾಲಜಿ ಮಾತನಾಡಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಡೇಹರಾಡೂನ್ ನಿಂದ ವಿಡಿಯೋ ಕಾನ್ಪರೇನ್ಸ್ ಮೂಲಕ ಮಾತನಾಡಿದರು.
ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ, ಎಂಆರ್‍ಪಿಎಲ್‍ನ ವ್ಯವಸ್ಥಾಪಕ ನಾಗರಾಜರಾವ್, ಶಿರಸಿ ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕ ಪಿ.ಬಸವರಾಜ, ಗ್ರಾಪಂ ಅಧ್ಯಕ್ಷೆ ಸರೋಜಾರಾವ್, ಉಪಾಧ್ಯಕ್ಷ ರಾಘವೇಂದ್ರ ರಾಯ್ಕರ್, ಸದಸ್ಯ ಅಬ್ದುಲ್ ಬಾರಿ ಹುಸೇನ್ ಸಾಬ್, ಪ್ರೌಢಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು ಇತರರಿದ್ದರು.
ಇದೇ ಸಂದರ್ಭದಲ್ಲಿ ಶ್ರೀಗಳು ಸುವರ್ಣ ಸ್ಮಾರಕ ಅನ್ನಪೂರ್ಣ ಸಭಾಭವನದ ನಿರ್ಮಾಣಕ್ಕೆ ವಿಶೇಷ ದಾನಿಗಳಾದ ನಾಗರಕಟ್ಟೆ ಸಹೋದರರಿಗೆ ಶಿಕ್ಷಣ ಸೇವಾ ಸಮಿತಿಯಿಂದ ಸನ್ಮಾನಿಸಿದರು.
ಪ್ರೌಢಶಾಲಾ ಅಧ್ಯಕ್ಷ ಎನ್.ಆರ್.ಭಟ್ಟ ಸ್ವಾಗತಿಸಿದರು. ಎಂ.ಎಂ.ಭಟ್ಟ, ಬಸವರಾಜ ಕಡಪಟ್ಟಿ ಕಾರ್ಯಕ್ರಮ ನಿರ್ವಹಿಸಿದರು.