ಅಂಕೋಲಾ: 90 ವರ್ಷಗಳ ಹಿಂದೆ ಅಂದರೆ 1930 ಡಿ.30 ರಂದು ಸೂರ್ವೆಯ ಕಳಶ ದೇವಸ್ಥಾನ ಮಹತ್ವದ ಪ್ರತಿಜ್ಞೆಯೊಂದಕ್ಕೆ ಸಾಕ್ಷಿಯಾಗಿತ್ತು. ಅದುವೇ ಕರಬಂದಿ ನಿರಾಕರಣೆಯ ಮೊಟ್ಟಮೊದಲ ತೀರ್ಮಾನ. ಸೂರ್ವೆಯ ಬೊಮ್ಮಯ್ಯ ಪೊಕ್ಕಾ ನಾಯಕ ಬ್ರಿಟೀಷರ ವಿರುದ್ಧ ಕರನಿರಾಕರಣೆಯನ್ನು ಮಾಡಿಯೇ ತೀರುತ್ತೇನೆಂದು ಘೋಷಿಸಿದಂತೆ ಸೂರ್ವೆಯ 39 ಖಾತೆದಾರರಲ್ಲಿ 33 ಜನ ಖಾತೆದಾರರು ಕರನಿರಾಕರಣೆ ಚಳುವಳಿಯಲ್ಲಿ ಭಾಗವಹಿಸಿ ಜೈಲು ಸೇರುವ ಮೂಲಕ ಕರ್ನಾಟಕದ ಬಾರ್ಡೋಲಿ ಎಂಬ ಹೆಸರು ಬರಲು ಸಾಕ್ಷಿಯಾದ ಈ ನೆಲದ ಮಹಿಮೆಯನ್ನು ಸಾರುವ ಹೋರಾಟದಲ್ಲಿ ಭಾಗವಹಿಸಿದವರನ್ನು ನೆನಪಿಸುವ ಮಾಹಿತಿ ಫಲಕವನ್ನು ರವಿವಾರ ಕಳಶ ದೇವಸ್ಥಾನದ ಬಳಿ ಹಿರಿಯ ಸಾಹಿತಿ ಶಾಂತಾರಾಮ ನಾಯಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದೊಂದು ಪುಣ್ಯದ ನೆಲ. ಈ ನೆಲಕ್ಕೆ ಹೋರಾಟದ ಕೆಚ್ಚಿದೆ. ಬ್ರಿಟೀಷರ ವಿರುದ್ಧ ಸಮಾಜದ ಅನೇಕ ದೇಶಾಭಿಮಾನಿಗಳು ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಕರನಿರಾಕರಣೆ ಆಂದೋಲನಕ್ಕೆ ಚಾಲನೆ ನೀಡಿದ ಸುಮಾರು 291 ಜನ ಜೈಲುವಾಸ ಅನುಭವಿಸಬೇಕಾಗಿ ಬಂತು. ಬೊಮ್ಮಯ್ಯ ಪೊಕ್ಕಾ ನಾಯಕರ ಮುಂದಾಳತ್ವದಲ್ಲಿ ಅಂದಿನ ಹೋರಾಟದಲ್ಲಿ ಇಲ್ಲಿನ ಪುರುಷರಷ್ಟೇ ಮಹಿಳೆಯರೂ ಸರಿಸಮಾನರಾಗಿ ಹೋರಾಟಕ್ಕಿಳಿದದ್ದು ಈ ನೆಲದ ದೇಶಾಭಿಮಾನವನ್ನು ತೋರಿಸುತ್ತದೆ. ಮಾಣು ದೇವಿ, ಕಾಣೆ ಬೊಮ್ಮಕ್ಕನಂತವರ ಕಥೆ ಕೇಳಿದಾಗ ರೋಮಾಂಚನವಾಗುತ್ತದೆ. ಛಲಕ್ಕೆ ಹೆಸರಾದ ಗೊನೆಹಳ್ಳಿ ವೆಂಕಣ್ಣ ನಾಯಕ ಇಂದಿಗೂ ಸ್ಪೂರ್ತಿಯಾಗುತ್ತಾರೆ. ಮುಂದಿನ ಪೀಳಿಗೆಯವರು ಸ್ವಾತಂತ್ರ್ಯ ಸಂಗ್ರಾಮದ ಕಥಾನಕಗಳ ಪುಸ್ತಕಗಳನ್ನು ಓದಬೇಕು ಎಂದರು.
ಮಾಹಿತಿ ಫಲಕ ನಿರ್ಮಾಣಕ್ಕೆ ಸ್ಪೂರ್ತಿಯಾದ ವಿಶ್ರಾಂತ ಉಪನ್ಯಾಸಕ ವಸಂತ ನಾಯಕ ಪ್ರಾಸ್ತಾವಿಕ ಮಾತನಾಡಿ, ಕರಬಂದಿ ಪ್ರತಿಜ್ಞೆಗೈದ ಸ್ಥಳದ ಮಾಹಿತಿ ಪಲಕದಲ್ಲಿ ಅನೇಕ ಹಿರಿಯ ತಲೆಮಾರಿನ ಮಹಾನುಭಾವರ ಹೆಸರನ್ನು ಉಲ್ಲೇಖಿಸಲಾಗಿದೆ. ಈ ಸ್ಥಳ ಐತಿಹಾಸಿಕ ಹಾಗೂ ಪ್ರವಾಸೀ ಸ್ಥಳವಾಗಬೇಕು. ಅಂಕೋಲೆಯ ಸ್ವಾತಂತ್ರ್ಯ ಹೋರಾಟದ ಘಟನಾವಳಿಗಳನ್ನು ಸಾಹಿತಿ ಶಾಂತಾರಾಮ ನಾಯಕರು ತಮ್ಮ ಆರು ಪುಸ್ತಕಗಳಲ್ಲಿ ಎಳೆಎಳೆಯಾಗಿ ಬರೆದಿದ್ದಾರೆ. ಕರ್ನಾಟಕ ಸರಕಾರದಿಂದ ಪ್ರಕಟಗೊಳ್ಳಲಿರುವ ಸ್ವಾತಂತ್ರ್ಯ ಹೋರಾಟದ 75 ಕೃತಿಗಳಲ್ಲಿ ಶಾಂತಾರಾಮ ನಾಯಕರ ಕೃತಿಯೂ ಒಂದಾಗಿರುವದು ನಮಗೆಲ್ಲ ಹೆಮ್ಮೆ ಎಂದರು.
ಕಾರ್ಯಕ್ರಮದಲ್ಲಿ ಶಾಂತಾರಾಮ ನಾಯಕ ಹಾಗೂ ಅನುಸೂಯ ಶಾಂತಾರಾಮ ನಾಯಕ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಅನುಸೂಯ ನಾಯಕ ಕರಬಂದಿ ಪ್ರತಿಜ್ಞೆಯ ಮಹಾನಾಯಕ ಬೊಮ್ಮಯ್ಯ ಪೊಕ್ಕಾ ನಾಯಕರ ಮೊಮ್ಮಗಳಾಗಿರುವದು ವಿಶೇಷವಾಗಿದೆ.
ಮಹಾದೇವ ನಾಯಕ ಸ್ವಾಗತಿಸಿದರು. ರಾಜೇಶ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಗಣಪತಿ ಟಿ. ನಾಯಕ ವಂದಿಸಿದರು. ಎನ್.ಬಿ.ನಾಯಕ, ಹರಿಶ್ಚಂದ್ರ ನಾಯಕ, ಬೊಮ್ಮಯ್ಯ ವಿ.ನಾಯಕ, ಬೀರಣ್ಣ ನಾಯಕ, ಗೋಪಾಲಕೃಷ್ಣ ನಾಯಕ (ಕಾಂತ ಮಾಸ್ತರ), ವಿಠ್ಠಲ ಗಾಂವಕರ, ತಾ.ಪಂ.ಮಾಜಿ ಅಧ್ಯಕ್ಷೆ ಮೀನಾಕ್ಷಿ ನಾಯಕ, ಮಾಜಿ ಸದಸ್ಯೆ ಶಾಂತಿ ಆಗೇರ, ಗ್ರಾ.ಪಂ.ಅಧ್ಯಕ್ಷೆ ಸವಿತಾ ವಿ.ನಾಯಕ ಇನ್ನಿತರರು ಉಪಸ್ಥಿತರಿದ್ದರು.