ಶಿರಸಿ: ತಾಲೂಕಿನ ಶ್ರೀ ಕ್ಷೇತ್ರ ಗೋಳಿಯ ಸಿದ್ಧಿವಿನಾಯಕ ದೇವಸ್ಥಾನ ಸಭಾಭವನದಲ್ಲಿ ನಡೆದ ನಾದಪೂಜಾ ಹಿಂದುಸ್ಥಾನಿ ಸಂಗೀತ ಕಾರ್ಯಕ್ರಮ ಅತ್ಯಂತ ಭಕಿಭಾವದಿಂದ ಕೂಡಿ ಕಿಕ್ಕಿರಿದ ಸಭೆಯ ಮನಸೂರೆಗೊಂಡಿದೆ. ಸಿದ್ದಾಪುರದ ಭುವನಗಿರಿಯ ಸುಷಿರ ಸಂಗೀತ ಪರಿವಾರ ಮತ್ತು ತಾರಾ ಷಡ್ಜ ಹಾಗೂ ಸಿದ್ಧಿವಿನಾಯಕ ದೇವಸ್ಥಾನ ಗೋಳಿ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಪೂರ್ಣ ಪ್ರಾಯೋಜಕತ್ವವನ್ನು ಎಸ್.ಎಸ್.ನೆಟ್ವರ್ಕ್ ಮತ್ತು ಕಮ್ಯುನಿಕೇಶನ್ ಇಂದಿರಾ ಪ್ರಕಾಶ ಶಿವಮೊಗ್ಗ ನೀಡಿತ್ತು.
ನಾದ ಪೂಜಾ ಆರಂಭಿಕ ಕಾರ್ಯಕ್ರಮವಾಗಿ ಖ್ಯಾತ ಗಾಯಕಿ ಸಾಗರದ ವಸುಧಾ ಶರ್ಮಾ ಅವರು ನಡೆಸಿಕೊಟ್ಟು ರಾಗ್ ಶುದ್ಧ ಸಾರಂಗ್‍ನಲ್ಲಿ ಚೀಜ್‍ಗಳನ್ನು ವೈವಿಧ್ಯಮಯವಾಗಿ ಪೂರ್ವಿ ತರಾನಾ ಪ್ರಸ್ತುತಗೊಳಿಸುತ್ತಾ ಭಕ್ತಿ ಹಾಡು ಮತ್ತು ಗೋಳಿ ಪೌರಾಣಿಕ ನಾಟಕದ ಜನಪ್ರಿಯ ನಾಟ್ಯಗೀತೆ ಭೋಶಂಕರ ಹಾಡಿ ತಮ್ಮ ನಾದಪೂಜೆಯನ್ನು ಸಮಾಪ್ತಿಗೊಳಿಸಿದರು. ತಬಲಾದಲ್ಲಿ ಉಡುಪಿಯ ಶ್ರೀವತ್ಸ ಶರ್ಮ ಹಾಗೂ ಹಾರ್ಮೋನಿಯಂನಲ್ಲಿ ವರ್ಗಾಸರ ಅಜಯ ಹೆಗಡೆ ಮತ್ತು ಸಹಗಾನ ಹಾಗೂ ತಾನ್‍ಪುರದಲ್ಲಿ ಗಾಯಕಿ ಶ್ರೀರಂಜಿನಿ ಸಹಕಾರ ನೀಡಿದರು.
ನಂತರ ನಡೆದ ನಾದಪೂಜಾ ಕಾರ್ಯಕ್ರಮದಲ್ಲಿ ಗಾಯಕ ವಿನಾಯಕ ಹೆಗಡೆ ಮುತ್ಮುರುಡು ಅವರು ತಮ್ಮ ಸಂಗೀತ ಕಛೇರಿ ನಡೆಸಿಕೊಟ್ಟು ಆರಂಭದಲ್ಲಿ ರಾಗ್ ಪಟದೀಪ್ ಪ್ರಸ್ತುತಗೊಳಿಸಿದರು. ಜನಾಪೇಕ್ಷೆಯ ಮೇರೆಗೆ ದಾಸರÀಪದ, ಗುರು ಭಜನ್‍ಗಳನ್ನು ಸುಶ್ರಾವ್ಯವಾಗಿ ಹಾಡಿ ಸಭೆಯ ಕರತಾಡನಕ್ಕೆ ಭಾಜನರಾದರು. ಇದೇ ಸಂದರ್ಭದಲ್ಲಿ ಗಾಯಕ ವಿನಾಯಕರವರು ಗೋಳಿಯ ಮಹಾಗಣಪತಿಯ ಮೇಲೆ ಸ್ವತಃ ತಾವೇ ರಚಿಸಿದ ಭಕ್ತಿಪೂರ್ವಕ ಹಾಡನ್ನು ಹಾಡಿ ನಾದಪೂಜೆ ಸಲ್ಲಿಸಿದ್ದು ವಿಶೇಷ. ಗಾಯಕರ ಶಾಸ್ತ್ರೀಯಕ್ಕೆ ಹಾಗೂ ಪ್ರತಿಯೊಂದು ಹಾಡಿಗೆ ತಕ್ಕಂತೆ ಕೊಳಲ್ಲಿ ಸುಮಧುರವಾಗಿ ಜುಗಲ್‍ಬಂದಿ ನಡೆಸಿದವರು ಕಲ್ಲಾರೆಮನೆ ಪ್ರಕಾಶ ಹೆಗಡೆ. ಖ್ಯಾತ ತಬಲಾ ವಾದಕರಾದ ಪಂ.ಸಾಸಲಿಂಗಪ್ಪ ದೇಸಾಯಿ ಕಲ್ಲೂರು ಅವರು ಅದ್ಭುತವಾದ ಬೋಲ್‍ಗಳ ನುಡಿಸಿ ಇಡೀ ಸಭೆಯನ್ನು ಸಂತೋಷಗೊಳಿಸಿದ್ದು ಸಂಗೀತಾಭಿಮಾನಿಗಳಿಗೆ ರಸದೂಟ ಬಡಿಸಿದಂತಿತ್ತು. ಹಾರ್ಮೋನಿಯಂನಲ್ಲಿ ಹೇಮಂತ್ ಭಾಗ್ವತ್ ಮಂಗಳೂರು ಹಾಗೂ ಇನ್ನೊಂದು ತಬಲಾದಲ್ಲಿ ಮಲ್ಲೇಶ್ ದೇಸಾಯಿ ಮತ್ತು ತಾಳದಲ್ಲಿ ವಿಶ್ವನಾಥ ಹೆಗಡೆ ಮತ್ತು ತಂಬೂರಾದಲ್ಲಿ ಮಲ್ಲಿಕಾ ಹಾಗೂ ಅನಂತ ಮೂರ್ತಿ ಸಾಥ್ ನೀಡಿದರು.
ನಾದಪೂಜಾ ಸಂಗೀತ ಕಛೇರಿ ಆರಂಭದಲ್ಲಿ ದತ್ತಾತ್ರೆಯ ಹೆಗಡೆ ಮತ್ತು ಎಸ್.ಎಸ್.ಕಮ್ಯುನಿಕೇಶನ್‍ನ ಸುಹಾಸ್ ಹೆಗಡೆ, ಕೆ.ಆರ್. ಹೆಗಡೆ ಅಮ್ಮಚ್ಚಿ, ದಾಮೋದರ ಭಾಗ್ವತ್, ಡಾ.ವಿನಾಯಕ್‍ರವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಗೋಳಿ ದೇವಸ್ಥಾನದ ಆಡಳಿತ ಮಂಡಳಿಯ ಎಮ್.ಎಲ್.ಹೆಗಡೆ ಹಲಸಿಗೆ ಸ್ವಾಗತಿಸಿದರು. ಸಾಮ್ರಾಟ್ ಸತೀಶ್ ಹೆಗಡೆ ಗೋಳಿಕೊಪ್ಪ ಕಾರ್ಯಕ್ರಮ ನಿರೂಪಿಸಿದರೆ, ಗಿರಿಧರ ಕಬ್ನಳ್ಳಿ ವಂದಿಸಿದರು. ಪದ್ಮನಾಭ ಕೊಪ್ಪೆಸರರವರ (ರಾಗ್ ಭೈರವಿ) ಒಂದು ಭಜನೆಯೊಂದಿಗೆ ಒಟ್ಟಾರೆ ನಾದಪೂಜಾ ಕಾರ್ಯಕ್ರಮ ಸಮಾಪ್ತಿಕೊಂಡಿತು.