ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಗೆ ಮಂಜೂರಿಯಾಗಿರುವ ಕಾರ್ಮಿಕ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾದ ಶ್ರಮಿಕ ಸಂಜೀವಿನಿ ಸಂಚಾರಿ ಚಿಕಿತ್ಸಾ ಘಟಕಕ್ಕೆ ಮಾನ್ಯ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಇಂದು ಪಟ್ಟಣದ ಕಾರ್ಯಾಲಯದ ಬಳಿ ಚಾಲನೆ ನೀಡುವ ಮೂಲಕವಾಗಿ ಜಿಲ್ಲೆಯ ಕಾರ್ಮಿಕರ ಸೇವೆಗೆ ಸಮರ್ಪಿಸಿದರು.
ಈ ವೇಳೆ ಮಾತನಾಡಿದ ಸಚಿವ ಶಿವರಾಮ ಹೆಬ್ಬಾರ್ ಅವರು ಈ ಸಂಚಾರಿ ಚಿಕಿತ್ಸಾ ಘಟಕವು ಕಾರ್ಮಿಕರು ಕಾರ್ಯನಿರ್ವಹಿಸುವ ಸ್ಥಳಕ್ಕೆ ತೆರಳಿ ಅವರಿಗೆ ವೈದ್ಯಕೀಯ ಸೇವೆ ನೀಡಲಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವೈದ್ಯಕೀಯ ಪರಿಕರಗಳನ್ನು ಈ ಸಂಚಾರಿ ಘಟಕವು ಹೊಂದಿದೆ ಹಾಗೂ ಶ್ರಮಿಕ ವರ್ಗದ ಸ್ವಾಸ್ಥ್ಯವನ್ನು ಕಾಪಾಡಲು ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಚಾರಿ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಂಚಾಯತ ರಾಜ್ಯ ವಿಕೇಂದ್ರೀಕರಣ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಪಟ್ಟಣ ಪಂಚಾಯತ ಅಧ್ಯಕ್ಷ ಸುನಂದಾ ದಾಸ್, ಉಪಾಧ್ಯಕ್ಷ ಶ್ಯಾಮಿಲಿ ಪಾಟಣಕರ್, ಸ್ಥಾಯಿ ಸಮಿತಿಯ ಅಧ್ಯಕ್ಷ ಅಮಿತ ಅಂಗಡಿ, ಸ್ಕೋಡವೇಸ ಸಂಸ್ಥೆಯ ವ್ಯವಸ್ಥಾಪಕ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್.ಗಾಂವ್ಕರ್, ಪ್ರಮುಖರಾದ ಶ್ರೀಕಾಂತ ಶೆಟ್ಟಿ, ವಿಜಯ ಮಿರಾಶಿ, ಮುರಳಿ ಹೆಗಡೆ, ಬಾಲಕೃಷ್ಣ ನಾಯಕ ಹಾಗೂ ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ ಮತ್ತು ಸ್ಕೋಡವೇಸ್ ಸಂಸ್ಥೆಯ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.