ಕಾರವಾರ: ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣದ ಕಾರ್ಯ ಕಾರವಾರ ತಾಲೂಕಿನಲ್ಲಿ ಆಮೆಗತಿಯಲ್ಲಿ ಸಾಗಿದ್ದರೂ ಈ ಕೆಲಸದ ಗುತ್ತಿಗೆದಾರರು ಬೇಕಾಬಿಟ್ಟಿಯಾಗಿ ಕಾಮಗಾರಿ ನಿರ್ವಹಿಸುತ್ತಿದ್ದಾರೆ.
ಬಿಣಗಾ ಸೋಮನಾಥ ಐಟಿಐ ಕಾಲೇಜ್‍ದಿಂದ ಸುಮಾರು 100 ಮೀಟರ್ ದೂರದಲ್ಲಿ ಜಲಮಂಡಳಿಗೆ ಸೇರಿದ ಒಂದು ನೀರಿನ ಟ್ಯಾಂಕ್ ಇದ್ದು ಈ ಟ್ಯಾಂಕ್ ಮೂಲಕವೇ ಹಿಂದೆ ಕಾರವಾರ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಈ ಟ್ಯಾಂಕ್‍ನ ಪಕ್ಕದಲ್ಲೇ ಟೆಲಿಕಾಂ ಕಂಪನಿಗೆ ಸೇರಿದ ಒಂದು ಬೃಹತ್ ಲೋಹದ ಟವರ್ ಸಹ ಇದೆ.
ಹೆದ್ದಾರಿಯನ್ನು ಅಗಲಿಕರಣ ಮಾಡುವ ಭರದಲ್ಲಿರುವ ಐಆರ್‍ಬಿ ಈ ಟ್ಯಾಂಕ್‍ಗೆ ಹೊಂದಿಕೊಂಡಂತೆ ಮಣ್ಣು ತೆಗೆದಿದ್ದು ಟವರ್ ಸಹ ಈಗ ರಸ್ತೆಯ ಅಂಚಿಗೆ ಬಂದಿದೆ.
ಈ ಟ್ಯಾಂಕ್ ಹಾಗೂ ಟವರ್‍ಗಳು ಯಾವುದೇ ವೇಳೆಯಲ್ಲಿ ಕುಸಿದು ಬೀಳುವ ಸಾಧ್ಯತೆ ಇದ್ದು ಹೆದ್ದಾರಿಯ ಕಡೆಗೆ ಕುಸಿದರೆ ಅದರಿಂದ ಅಮಾಯಕರು ಜೀವ ಕಳೆದುಕೊಳ್ಳುವ ಅಥವಾ ಅಂಗವಿಕಲರಾಗುವ ಸಾಧ್ಯತೆಯೇ ಹೆಚ್ಚು. ರಸ್ತೆಯ ಮೇಲೆ ಸಂಚರಿಸುವ ವಾಹನಗಳ ಮೇಲೆ ಬೀಳಲು ಆಗಲೋ ಈಗಲೋ ಎಂಬಂತೆ ಈ ಟ್ಯಾಂಕ್ ಹಾಗೂ ಟವರ್‍ಗಳು ನಿಂತಿವೆ. ಇದನ್ನು ಗುತ್ತಿಗೆದಾರ ಕಂಪನಿ ಗಂಭೀರವಾಗಿ ಪರಿಗಣಿಸಿದಂತಿಲ್ಲ.
ಒಂದೋ ಈ ಟ್ಯಾಂಕ್ ಹಾಗೂ ಟವರ್‍ಗಳನ್ನು ತೆರವುಗೊಳಿಸಿ ಕಾಮಗಾರಿಯನ್ನೇ ಮುಂದುವರಿಸಲಿ ಅಥವಾ ಅವು ರಸ್ತೆಗೆ ಉರುಳದಂತೆ ಮುನ್ನೆಚ್ಚರಿಕೆಯನ್ನಾದರೂ ತೆಗೆದುಕೊಳ್ಳಲಿ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬಂದಿದೆ.