ಹೊನ್ನಾವರ: ಹಳದೀಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ದೀಪಗಳಿಲ್ಲದೇ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತ ಹೆಚ್ಚಾಗುತ್ತಿದ್ದು ಕೂಡಲೇ ಸಮರ್ಪಕವಾಗಿ ಕಾಮಗಾರಿ ನಡೆಸಿ ಅವ್ಯವಸ್ಥೆ ಸರಿಪಡಿಸುವಂತೆ ಹಳದಿಪುರ ಗ್ರಾಮಸ್ಥರು ಪಂಚಾಯತ್ ಗೆ ಮನವಿ ಸಲ್ಲಿಸಿದರು.
ಬಡಗಣಿ ಸೇತುವೆಯಿಂದ ಸಾಲಿಕೆರಿಯವರೆಗೆ ಬೀದಿ ದೀಪಗಳು ಇಲ್ಲದೆ ಇರುವುದರಿಂದ ರಾತ್ರಿಯ ಸಮಯದಲ್ಲಿ ಪಾದಚಾರಿಗಳು ವಾಹನ ಸವಾರರಿಗೆ ಗೋಚರಿಸದೆ ಅಪಘಾತಗಳು ಹೆಚ್ಚಾಗುತ್ತಿದೆ. ಚತುಷ್ಪಥ ರಸ್ತೆ ಕಾಮಗಾರಿ ಪಡೆದ ಐ ಆರ್ ಬಿ ಕಂಪನಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಮಾಡಿದ ಕರಾರಿನ ಪ್ರಕಾರ ಇದರ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಹಳದಿಪುರದ ಬಡಗಣಿಯಿಂದ ಸಾಲಿಕೇರಿಯವರೆಗೆ ದೀಪದ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಒಂದು ವಾರದ ಗಡುವಿನಲ್ಲಿ ದೀಪದ ವ್ಯವಸ್ಥೆಯ ಕಾಮಗಾರಿ ಸಂಪೂರ್ಣ ಮುಕ್ತಾಯವಾಗದೆ ಇದ್ದಲ್ಲಿ ಹಳದಿಪುರದ ಗ್ರಾಮ ಪಂಚಾಯತ್ ನ ಎಲ್ಲಾ ಪ್ರಜ್ಞಾವಂತ ನಾಗರಿಕರು ಐ. ಆರ್. ಬಿ. ಕಂಪನಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.