ಅಂಕೋಲಾ: ರಸ್ತೆ ದಾಟುತ್ತಿದ್ದ ಪಾದಾಚಾರಿಗೆ ರೇಂಜ್ ರೋವರ್ ಕಾರು ಡಿಕ್ಕಿಹೊಡೆದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಬಾಳೆಗುಳಿಯ ವರದರಾಜ ಹೊಟೇಲ ಎದುರು ನಡೆದಿದೆ.
ಅಪಘಾತದ ರಭಸಕ್ಕೆ ಪಾದಾಚಾರಿಯ ಎರಡೂ ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅಂಬುಲೆನ್ಸ್ ಮೂಲಕ ತಾಲೂಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ನಡೆದ ಸ್ಥಳದ ಬಳಿ ಹೋಟೆಲೊಂದರಲ್ಲಿ ಕೆಲಸಕ್ಕಿದ್ದ ಧಾರವಾಡ ಜಿಲ್ಲೆಯ ಕಿತ್ತೂರು ನಿವಾಸಿ ರಾಜು ನಾಗಪ್ಪ ಕಿತ್ತೂರು ಅಪಘಾತದಿಂದ ಗಾಯಗೊಂಡ ವ್ಯಕ್ತಿಯಾಗಿದ್ದಾನೆ.
ಅಂಕೋಲಾ ಕಡೆಯಿಂದ ಕಾರವಾರ ಕಡೆ ಸಾಗುತ್ತಿದ್ದ ರೇಂಜ್ ರೋವರ್ ಕಾರು ಆತನಿಗೆ ಬಡಿದ ಪರಿಣಾಮವಾಗಿ ಈ ಅಪಘಾತ ಸಂಭವಿಸಿದ್ದು, ಕಾರು ಚಾಲಕ ಕೇರಳದ ತಿರೂರು ನಿವಾಸಿ ಸಾಬೀಲ್ ಕೋಯಕುಟ್ಟಿ ರೆಹಮಾನ್ ಎನ್ನುವವರ ಮೇಲೆ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಪಘಾತ ಸಂಭವಿಸಿದಾಗ ಅಂಕೋಲಾ ಉದ್ಯಮಿ ಮತ್ತು ಜಯಕರ್ನಾಟಕ ಸಂಘಟನೆಯ ಜಿಲ್ಲಾ ಪ್ರಮುಖ ಅಜಿತ್ ನಾಯಕ, ಜಿಲ್ಲಾಧ್ಯಕ್ಷ ಸುನಿಲ್ ನಾಯ್ಕ ಸೇರಿದಂತೆ ಅವರ ತಂಡ ಸಹಕರಿಸಿ ಮಾನವೀಯತೆ ಮೆರೆದಿದ್ದಾರೆ.