ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.
ಜಿಲ್ಲಾಧಿಕಾರಿಗಳ ಜೊತೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳು, ಓಮಿಕ್ರಾನ್ ತಡೆಗೆ ಪೂರ್ವಸಿದ್ಧತೆ, ರೈತ ವಿದ್ಯಾ ಸಿರಿ ಯೋಜನೆ, ವಿಶೇಷಚೇತನರ ಮಾಸಾಶನ ಯೋಜನೆ, ನೆರೆ ಪರಿಹಾರ ವಿತರಣೆ, ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.
“ಜಿಲ್ಲಾಧಿಕಾರಿಗಳು ಜನರ ಸೇವೆ ಮಾಡುವ ಸಾರ್ವಜನಿಕ ಸೇವಾಧಿಕಾರಿಗಳು. ಬಾಸಿಸಂ ಬಿಟ್ಟು ಜನರ ಕೆಲಸ ಮಾಡಿ. ಜನರ ನಡುವೆ ಹೋಗಿ ಜನರ ಜೊತೆ ಕೆಲಸ ಮಾಡಿ. ಕೆಳಹಂತದ ಅಧಿಕಾರಿಗಳು ನಿಮ್ಮಂತೆಯೇ ವರ್ತಿಸಲು ಅವಕಾಶ ಕೊಡಬೇಡಿ. ನಿಮ್ಮ ಸ್ವಂತಿಕೆ, ವಿವೇಚನೆ ಬಳಸಿ ಕೆಲಸ ಮಾಡಿ. ಅಧಿಕಾರ ನಿಮ್ಮಲ್ಲಿ ಇನ್ನಷ್ಟು ವಿನಂಬ್ರತೆ, ವಿನಯತೆ ತರಬೇಕು, ಎಚ್ಚರಿಕೆಯಿಂದ ಆಡಳಿತ ಕೆಲಸ ಮಾಡಿ” ಎಂದು ಈ ಸಂದರ್ಭದಲ್ಲಿ ಸಿಎಂ ತಾಕೀತು ಮಾಡಿದರು.
ಬೆಳೆಗಳ ಹಾನಿ, ಮನೆ ಹಾನಿಗೆ ಪರಿಹಾರ ಕೊಡದ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದ ಸಿಎಂ, ಕೆಲಸ ಆಗಿಲ್ಲ ಅಂತ ಕೆಳಗಿನ ಅಧಿಕಾರಿಗಳ ಮೇಲೆ ಆಪಾದನೆ ಮಾಡಬೇಡಿ. ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ ಜಿಲ್ಲೆಗಳ ಅಭಿವೃದ್ಧಿಗೆ ಪ್ರಮುಖ ಆದ್ಯತೆ ನೀಡಬೇಕಾಗಿರುವುದು ಜಿಲ್ಲಾಧಿಕಾರಿಗಳೇ ಹೊರತು ಕೆಳಮಟ್ಟದ ಅಧಿಕಾರಿಗಳಲ್ಲ ಎಂದು ಸೂಚನೆ ನೀಡಿದರು.