ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಸಂಹರಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಕಳೆದ 24 ಗಂಟೆಗಳಲ್ಲಿ ನಡೆದ 3 ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 9 ಮಂದಿ ಉಗ್ರರು ಹತರಾಗಿದ್ದಾರೆ.
ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಅವರು ಇಂದು ಭಯೋತ್ಪಾದಕರ ಹತ್ಯೆಯನ್ನು ದೃಢಪಡಿಸಿದ್ದಾರೆ ಮತ್ತು ಅವರ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
“ಪಂಥಾ ಚೌಕ್ ಎನ್‌ಕೌಂಟರ್‌ನಲ್ಲಿ ಮೂವರು ಅಪರಿಚಿತ ಭಯೋತ್ಪಾದಕರು ಹತರಾಗಿದ್ದಾರೆ. ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ಅನೇಕ ವಸ್ತುಗಳನ್ನು ಅವರಿಂದ ನಾವು ವಶಪಡಿಸಿಕೊಂಡಿದ್ದೇವೆ. ಆರಂಭಿಕ ಗುಂಡಿನ ದಾಳಿಯಲ್ಲಿ ಕನಿಷ್ಠ 4 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ” ಎಂದು ಹೇಳಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕಾಶ್ಮೀರದಲ್ಲಿ ನಡೆದ ಮೂರನೇ ಎನ್‌ಕೌಂಟರ್ ಇದಾಗಿದೆ. ದಕ್ಷಿಣ ಕಾಶ್ಮೀರದಲ್ಲಿ ಸಂಭವಿಸಿದ ಎರಡು ಎನ್‌ಕೌಂಟರ್‌ಗಳಲ್ಲಿ, ಎರಡು ಜಿಲ್ಲೆಗಳ ಭದ್ರತಾ ಪಡೆಗಳು 6 ಜೈಶೇ ಮೊಹಮ್ಮದ್ ಭಯೋತ್ಪಾದನಾ ಸಂಘಟನೆಗೆ ಸೇರಿದ ಭಯೋತ್ಪಾದಕರನ್ನು ಕೊಂದಿರುವುದಾಗಿ ಹೇಳಿಕೊಂಡಿವೆ, ಅವರಲ್ಲಿ ಇಬ್ಬರು ಪಾಕಿಸ್ತಾನಿಗಳು ಮತ್ತು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ.
ಇದು 2021 ರ 87 ನೇ ಎನ್‌ಕೌಂಟರ್ ಆಗಿದ್ದು, ಭದ್ರತಾ ಪಡೆಗಳು ಇದುವರೆಗೆ 171 ಭಯೋತ್ಪಾದಕರನ್ನು ಕೊಲ್ಲುವಲ್ಲಿ ಯಶಸ್ವಿಯಾಗಿವೆ.