ಸಿದ್ದಾಪುರ: ಯಕ್ಷಗಾನ ಅಕಾಡೆಮಿಗೆ ತಾಕತ್ತು ಕೊಟ್ಟ ಎಂ.ಎ.ಹೆಗಡೆ ಅವರ ಅಗಲಿಕೆಯ ಎಂಟು ತಿಂಗಳಾದರೂ ಆ ಸ್ಥಾನದ ಮುಂದುವರಿಕೆಗೆ ಸಮರ್ಥ ವ್ಯಕ್ತಿ ನೇಮಕ ಮಾಡದೇ ಸರಕಾರವು ಆಡಳಿತಾಧಿಕಾರಿ ನೇಮಕ ಮಾಡಿದ್ದು ಸರಿಯಲ್ಲ ಎಂದು ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಮಂಡಳಿ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅಸಮಧಾನಿಸಿದರು.
ಸ್ವರ್ಣವಲ್ಲೀ ಯಕ್ಷಶಾಲ್ಮಲಾ, ದಿ.ಎಂ.ಎ.ಹೆಗಡೆ ಸಂಸ್ಮರಣಾ ಸಮಿತಿಯಿಂದ ಹೆಗ್ಗರಣಿಯಲ್ಲಿ ಸ್ಥಳೀಯ ಸೊಸೈಟಿ ಸಹಕಾರದಲ್ಲಿ ಎಂ.ಎ.ಹೆಗಡೆ ಅವರ ಸಂಸ್ಮರಣ ಹಾಗೂ ಸುಧನ್ವಾರ್ಜುನ ತಾಳಮದ್ದಲೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಯಕ್ಷಗಾನ ಅಕಾಡೆಮಿಗೆ ಹೊಸ ಮೆರಗು, ಕನಸು ಕೊಟ್ಟಿದ್ದರು. ಅವರ ಕನಸು ಈಡೇರಿಸಬೇಕು. ಆದರೆ, ಅವರ ಸ್ಥಾನ ತುಂಬುವವರ ನೇಮಕ ಮಾಡದೇ ಆಡಳಿತಾಧಿಕಾರಿ ನೇಮಕ ಮಾಡಿದ್ದು ನೋವಿನ ಸಂಗತಿ. ಅದು ಹೆಗಡೆ ಅವರಿಗೆ ನೀಡುವ ಗೌರವವೂ ಅಲ್ಲ. ಈ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಶಿವರಾಮ ಹೆಬ್ಬಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೂ ಮಾತನಾಡುತ್ತೇನೆ. ಆಡಳಿತಾಧಿಕಾರಿ ನೇಮಕ ಬಿಟ್ಟು ಅಧ್ಯಕ್ಷರ ನೇಮಕಾತಿ ಮಾಡಬೇಕು. ನೂತನ ಅಧ್ಯಕ್ಷರೂ ಎಂ.ಎ.ಹೆಗಡೆ ಅವರಂತೆ ಮಾದರಿಯಾಗಬೇಕು ಎಂದೂ ಬಯಸುವದಾಗಿ ಹೇಳಿದರು.
ಯಕ್ಷಗಾನ ಕವಿ, ಅರ್ಥದಾರಿ ದಿವಾಕರ ಹೆಗಡೆ ಕೆರೆಹೊಂಡ, ಎಂ.ಎ.ಹೆಗಡೆ ಅವರ ಒಡನಾಟದ ಕುರಿತು ಮಾತನಾಡಿ, ಸಂಯಮದ ವ್ಯಕ್ತಿ. ಅವರು ಎಷ್ಟು ಬರೆದಿದ್ದಾರೆ ಎಂದರೆ ಮೂರು ಪಿಎಚ್ಡಿ ಮಾಡಬಹುದಿತ್ತು. ಬಹು ಎತ್ತರಕ್ಕೆ ಏರಿದವರು. ಸಂಸ್ಕ್ರತಿ, ಮೂಲ ಮರೆತಿರಲಿಲ್ಲ. ಅವರು ದೊಡ್ಡವರು ಎಂಬುದು ಅವರ ನಂತರ ಗೊತ್ತಾಗಿದ್ದೂ ಆಗಿದೆ. ಲೋಕ ಶಿಕ್ಷಣಕ್ಕೆ ತೆರೆದಿದ್ದವರು ಎಂದರು. ಮಾಹಿತಿ, ವಿವೇಕದ ಜೊತೆ ವ್ಯಕ್ತಿತ್ವ ಬೆಳಸಿಕೊಳ್ಳಬೇಕು ಎಂದರು.
ಸಂಸ್ಮರಣ ಸಮಿತಿ ಸಂಘಟನಾ ಕಾರ್ಯದರ್ಶಿ ನಾಗರಾಜ್ ಜೋಶಿ ಮಾತನಾಡಿ, ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಮಾರ್ಗದರ್ಶನದಲ್ಲಿ, ಯಕ್ಷ ಶಾಲ್ಮಲಾ ಸಂಸ್ಥೆ ಅಡಿಯಲ್ಲಿ ಸಂಸ್ಮರಣ ಸಮಿತಿ ರಚಿಸಿ ಕೆಲಸ ಮಾಡಲಾಗುತ್ತಿದೆ.
ಎಂ.ಎ.ಹೆಗಡೆ ಅವರ ಕುರಿತು ಸಂಸ್ಮರಣ ಗ್ರಂಥ, ಅವರ ಅಗಲಿಕೆ ವರ್ಷದ ಒಳಗೆ ಸಂಸ್ಮರಣ ಗ್ರಂಥ, ಅವರ ಹೆಸರಿನಲ್ಲಿ ಪ್ರಶಸ್ತಿ ಕೂಡ ಕೊಡಲು ತೀರ್ಮಾನಿಸಲಾಗಿದೆ ಎಂದ ಅವರು, ನಾಡಿನ ಹಲವಡೆ ಸರಣಿ ತಾಳಮದ್ದಲೆ ನಡೆಸಲಾಗುತ್ತಿದೆ. ಅಂಥ ವೇಳೆ ಸಾಕ್ಷ್ಯಚಿತ್ರ, ಅಧ್ಯಯನ ಪೀಠದ ಒತ್ತಾಯವೂ ಕೇಳಿ ಬಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹೆಗ್ಗರಣಿ ಸೊಸೈಟಿ ಅಧ್ಯಕ್ಷ ಎಂ.ಎಲ್.ಭಟ್ಟ, ಯಕ್ಷಗಾನ ಅಕಾಡೆಮಿ ಅಧ್ಯಕ್ಷತೆಗೆ ಎಂಎ.ಹೆಗಡೆ ಅವರಿಂದ ತೂಕ ಬಂದಿದೆ. ಅವರು ಇನ್ನೂ ಇರಬೇಕಿತ್ತು ಎಂದರು. ಎಸ್.ಎ.ಹೆಗಡೆ ಜೋಗನಮನೆ ಸ್ವಾಗತಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ನಿರ್ವಹಿದರು.
ಬಳಿಕ ಸುಧನ್ವಾರ್ಜುನ ತಾಳಮದ್ದಲೆ ನಡೆಯಿತು. ಭಾಗವತರಾಗಿ ಕೇಶವ ಹೆಗಡೆ ಕೊಳಗಿ, ಮಹೇಶ ಹೆಗಡೆ, ಮದ್ದಲೆಯಲ್ಲಿ ಮಂಜುನಾಥ ಗುಡ್ಡೆದಿಂಬ, ಅರ್ಥಗಾರಿಕೆಯಲ್ಲಿ ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ, ದಿವಾಕರ ಹೆಗಡೆ ಕೆರೆಹೊಂಡ, ಜಿ.ಕೆ.ಭಟ್ಟ ಕಶಿಗೆ, ಮಂಜುನಾಥ ಗೊರಮನೆ ಪಾತ್ರ ಕಟ್ಟಿಕೊಟ್ಟರು.
ಒಂದು ಕೃತಿ ಕೃತಿಕಾರನನ್ನೂ ಮೀರಿ ಬೆಳೆಯೋದು ಕೃತಿಕಾರನಿಗೆ ದೊಡ್ಡ ಸರ್ಟಿಫಿಕೇಟ್. ಎಂ.ಎ.ಹೆಗಡೆ ಅವರ ಅನೇಕ ಕೃತಿಗಳು ಅಂಥವು.
– ದಿವಾಕರ ಹೆಗಡೆ ಕೆರೆಹೊಂಡ, ಸದಸ್ಯರು ಯಕ್ಷಗಾನ ಅಕಾಡೆಮಿ
ಕಂಡದ್ದು ಕಂಡ ಹಾಗೆ ತಿದ್ದುವ ಕೆಲಸ ಮಾಡಿದವರು. ಒಂದು ಕೆಲಸ ಮಾಡಿ ಹತ್ತು ಮಾಡಿದ್ದಾಗಿ ಹೇಳುವವರ ನಡುವೆ ಹತ್ತು ಕೆಲಸ ಮಾಡಿ ಒಂದೂ ಹೇಳದೇ ಇರುವವರು ಎಂ.ಎ.ಹೆಗಡೆ ಅವರಾಗಿದ್ದರು.
– ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಸಂಸ್ಮರಣ ಸಮಿತಿ ಕಾರ್ಯಾಧ್ಯಕ್ಷ