ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹತ್ತನೇ ಕಂತಿನ ಆರ್ಥಿಕ ಲಾಭವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನವರಿ 1 ರಂದು ಮಧ್ಯಾಹ್ನ 12.30 ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಬಿಡುಗಡೆ ಮಾಡಲಿದ್ದಾರೆ.
10 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ 20 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣ ವರ್ಗಾವಣೆಯಾಗಲಿದೆ.
ಪಿಎಂ ಕಿಸಾನ್ ಯೋಜನೆಯಡಿಯಲ್ಲಿ, ಅರ್ಹ ರೈತರ ಕುಟುಂಬಕ್ಕೆ ವರ್ಷಕ್ಕೆ ಆರು ಸಾವಿರ ರೂಪಾಯಿಗಳ ಆರ್ಥಿಕ ಪ್ರಯೋಜನವನ್ನು ಒದಗಿಸಲಾಗುತ್ತದೆ. ಮೊತ್ತವನ್ನು ಎರಡು ಸಾವಿರ ರೂಪಾಯಿಗಳ ಮೂರು ಕಂತುಗಳಲ್ಲಿ ವರ್ಗಾಯಿಸಲಾಗುತ್ತಿದೆ. ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಇದುವರೆಗೆ ರೈತರ ಕುಟುಂಬಗಳಿಗೆ 1 ಲಕ್ಷದ 60 ಸಾವಿರ ಕೋಟಿ ರೂ.ವರ್ಗಾವಣೆ ಮಾಡಲಾಗಿದೆ
ಪ್ರಧಾನಮಂತ್ರಿಯವರು ಸುಮಾರು 351 ರೈತ ಉತ್ಪಾದಕ ಸಂಸ್ಥೆಗಳಿಗೆ (ಎಫ್‌ಪಿಒ) 14 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಇಕ್ವಿಟಿ ಅನುದಾನವನ್ನು ಬಿಡುಗಡೆ ಮಾಡಲಿದ್ದಾರೆ, ಇದು 1 ಲಕ್ಷದ 24 ಸಾವಿರಕ್ಕೂ ಹೆಚ್ಚು ರೈತರಿಗೆ ಪ್ರಯೋಜನವನ್ನು ನೀಡುತ್ತದೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ರೈತ ಉತ್ಪಾದಕ ಸಂಸ್ಥೆಗಳೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೇಂದ್ರ ಕೃಷಿ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.