ಕಾರವಾರ: ನಗರದ ಕೆಲವು ರಸ್ತೆಗಳು ಸಂಧಿಸುವ ಜಾಗದ ಬಲಭಾಗದಲ್ಲಿ ಕಟ್ಟಡಗಳಿವೆ. ಇದರಿಂದ ವಾಹನ ಸವಾರರಿಗೆ ಮತ್ತು ಪಾದಚಾರಿಗಳು ಬಹಳ ಗೊಂದಲದಲ್ಲೇ ಸಂಚರಿಸುವAತಾಗಿದೆ. ಇಂಥ ಪ್ರದೇಶಗಳಲ್ಲಿ ‘ಟ್ರಾಫಿಕ್ ಮಿರರ್’ ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಿಕಳೆ ರಸ್ತೆಯಿಂದ ಕೋಡಿಬಾಗ ರಸ್ತೆ ಸೇರುವ ಜಾಗದಲ್ಲಿ ಈ ಸಮಸ್ಯೆ ಹೆಚ್ಚಿದ್ದು ಪಿಕಳೆ ರಸ್ತೆಯಿಂದ ಬಂದ ವಾಹನಗಳು ಬಲಕ್ಕೆ ತಿರುಗಿ ಹೂವಿನ ಚೌಕದತ್ತ ಸಾಗುವಾಗ ಬಹಳ ಗಲಿಬಿಲಿಯಾಗುತ್ತದೆ. ಹೂವಿನ ಚೌಕದ ಕಡೆಯಿಂದ ವಾಹನಗಳು ಬರುವುದು ತಕ್ಷಣ ಅರಿವಿಗೆ ಬರುವುದಿಲ್ಲ. ವಾಹನಗಳನ್ನು ಚಾಲಕರು ರಸ್ತೆಯ ಮಧ್ಯಭಾಗಕ್ಕೆ ತಂದಾಗಲೇ ಎದುರಿನಿಂದ ವಾಹನಗಳು ಬರುವುದು ತಿಳಿಯುತ್ತದೆ. ಇಲ್ಲಿ ನಾಲ್ಕು ರಸ್ತೆಗಳು ಸೇರುವದರಿಂದ ಸದಾ ವಾಹನಗಳ ಸಂಚಾರ ಹೆಚ್ಚಿರುತ್ತದೆ. ಪಿಕಳೆ ರಸ್ತೆಗಿಂತ ಕೋಡಿಬಾಗ ರಸ್ತೆಯು ಸ್ವಲ್ಪ ಎತ್ತರದಲ್ಲಿದೆ. ಹಾಗಾಗಿ ವಾಹನ ಚಾಲಕರು ತುಸು ಎಚ್ಚರ ತಪ್ಪಿದರೂ ಅಪಘಾತಗಳಾಗುವ ಸಾಧ್ಯತೆಯಿದೆ.
ಕೆ. ಎಚ್. ಬಿ. ಹೊಸ ಬಡಾವಣೆಯಲ್ಲಿ ಕೂಡ ಇಂಥದ್ದೇ ಸಮಸ್ಯೆಯಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಕಡೆಯಿಂದ ಭಗವತಿ ಸ್ಟೋರ್ಸ್ನತ್ತ ಸಾಗುವಾಗ ಮತ್ತೊಂದು ರಸ್ತೆ ಸೇರುತ್ತದೆ. ಇಲ್ಲಿ ರಸ್ತೆ ಇಕ್ಕಟ್ಟಾಗಿದ್ದು, ತಿರುವು ಇದೆ. ಇಲ್ಲೂ ಆಗಾಗ ವಾಹನಗಳು ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗುತ್ತಿವೆ.
ಹಾಗಾಗಿ ಇಂಥ ಪ್ರದೇಶಗಳನ್ನು ಗುರುತಿಸಿ ದೊಡ್ಡದಾದ ‘ಟ್ರಾಫಿಕ್ ಮಿರರ್’ಗಳನ್ನು (ಪೀನ ಮಸೂರ ಮಾದರಿಯ ಕನ್ನಡಿ) ಅಳವಡಿಸಬೇಕು. ಇದರ ಮೂಲಕ ಎರಡೂ ಕಡೆಗಳಿಂದ ವಾಹನಗಳು ಬರುವುದನ್ನು ಚಾಲಕರು ಗುರುತಿಸಲು ಸಾಧ್ಯವಿದೆ. ನಗರಸಭೆ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರು ಇದಕ್ಕೆ ಸ್ಪಂದಿಸುವ ನಿರೀಕ್ಷೆಯಿದೆ.