ಶಿರಸಿ: ಮಲೆನಾಡಿನ ಹಳ್ಳಿಗರ ಕೃಷಿಯಲ್ಲಿ ಅವಿಭಾಜ್ಯ ಅಂಗವೇ ಆಗಿದ್ದ ಆಲೆಮನೆ ಇತ್ತೀಚಿನ ದಿನಗಳಲ್ಲಿ ಕಾಣ ಸಿಗುವುದು ಅಪರೂಪವೇ ಆಗಿದೆ. ಪ್ರೀತಿ, ವಿಶ್ವಾಸ, ಆದರ ಆತಿಥ್ಯದ ಪ್ರತೀಕವಾಗಿ ಕಾಣಬರುತ್ತಿದ ಆಲೆಮನೆ ಕಣ್ಮರೆಯಾಗುತ್ತಿದೆ. ಆಲೆಮನೆ ವಾಣಿಜ್ಯವಾಗಿದೆ. ಕಬ್ಬು, ಕಬ್ಬಿನಹಾಲು ವ್ಯಾಪಾರಕ್ಕಷ್ಟೇ ಸೀಮಿತವಾಗುತ್ತಿದೆ. ಇದಕ್ಕೆ ಅಪವಾದವೆನ್ನುವಂತೆ ಅಲ್ಲಿ ಇಲ್ಲಿ ಸಾಂಪ್ರದಾಯಿಕ ಆಲೆಮನೆಗಳು ನಡೆಯುತ್ತವೆ.
ಹಿಂದೆ ಪುಟ್ಟ ಪುಟ್ಟ ಹಳ್ಳಿಗಳ ಗೂಡಾದ ಮಲೆನಾಡಿನಲ್ಲಿ ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳುಗಳಲ್ಲಿ ಎಲ್ಲಡೆ ಆಲೆಮನೆ. ಹೊಸಬೆಲ್ಲದ ಸುವಾಸನೆ ಗಾಳಿಯಲ್ಲಿ ತೇಲಿಬರುತ್ತಿತ್ತು. ಆ ಪರಿಮಳ ದಾರಿಹೋಕರನ್ನೂ ತನ್ನತ್ತ ಸೆಳೆಯುತ್ತಿತ್ತು. ಅಪರಾಹ್ನ ಇಳಿಹೊತ್ತಿಗೆ ಕಬ್ಬನ್ನು ಅರೆಯಲು ಪ್ರಾರಂಭಿಸಿದರೆ ಕತ್ತಲಾದಮೇಲೂ ಈ ಕೆಲಸ ನಡೆಯುತ್ತಿರುತ್ತಿತ್ತು. ಆಲೆಮನೆಗೆ ಬಂದವರಿಗೆ ಕುಡಿಯಲು ಕಬ್ಬಿನಹಾಲು ಯತೇಚ್ಛವಾಗಿ ಸಿಗುತ್ತಿತ್ತು.
ಈಗ ಕಾಲ ಬಹಳ ಬದಲಾಗಿದೆ. ಕಬ್ಬು ಬೆಳೆಯುವುದಕ್ಕೆ ರೈತರಿಗೆ ಮುಖ್ಯವಾಗಿ ಕೂಲಿಯ ಸಮಸ್ಯೆ. ಕಬ್ಬಿನ ಕೆಲಸಕ್ಕೆ ಕಾಲಕಾಲಕ್ಕೆ ಅಗತ್ಯವಾದ ಕೆಲಸಗಾರರು ಸಿಗುತ್ತಿಲ್ಲ. ಬೆಳೆದ ಕಬ್ಬಿನ ಆಲೆ ಕಟ್ಟುವುದಕ್ಕೆ ಕೋಣ, ಗಾಣದ ಸಮಸ್ಯೆ ಎಂಬ ಕಾರಣ ಇಟ್ಟು-ಕೊಂಡು ಕಬ್ಬು ಬೆಳೆಯುವುದು ಬಹುತೇಕ ನಿಂತೇಹೋಗಿದೆ. ಹಾಗೂ ಕಬ್ಬು ಬೆಳೆದರೆ ಮಶೀನ್ ಗಾಣದ ಸಹಾಯದಿಂದ ಕಬ್ಬು ಅರೆಯುವ ಕೆಲಸ ನಡೆಯುತ್ತದೆ. ಆಲೆಮನೆ ವಾಣಿಜ್ಯವಾಗಿದೆ. ಕಬ್ಬು, ಕಬ್ಬಿನಹಾಲು ವ್ಯಾಪಾರಕ್ಕಷ್ಟೇ ಸೀಮಿತವಾಗುತ್ತಿದೆ.