
ಜೋಯಿಡಾ: ಹೊಸಪೇಟೆ-ವಾಸ್ಕೊ ರೈಲು ಮಾರ್ಗದ ಅಭಿವೃದ್ಧಿ ಮಾರ್ಗದಲ್ಲಿ ಬರುವ, ಕಾಳಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಹಳಿಯಾಳ ವಿಭಾಗದ ರಕ್ಷಿತ ಅರಣ್ಯ ಪ್ರದೇಶದಲ್ಲಿ ತಿನೈಘಾಟ-ಕ್ಯಾಸಲ್‍ರಾಕ್ ಪ್ರದೇಶದಲ್ಲಿ ಸಾವಿರಾರು ಮರಗಳನ್ನು ಕಡಿಯಲು ತರಾ ತುರಿಯಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಹಳಿಯಾಳ ವಿಭಾಗದ ಅರಣ್ಯ ಅಧಿಕಾರಿಗಳು ಆದೇಶ ನೀಡಿರುವುದು ಸಂಶಯಕ್ಕೆ ಎಡೆ ಮಾಡಿದೆ.
ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕ್ಯಾಸಲ್ ರಾಕ್ ವಲಯದಲ್ಲಿ ಹೊಸ ರೈಲು ಮಾರ್ಗದ 9.57 ಹೇಕ್ಟೇರ್ ಅರಣ್ಯ ಪ್ರದೇಶದೊಳಗೆ ಬರುವ ಸುಮಾರು 2097 ಮರಗಳನ್ನು ಕಡಿಯಲು ಎ.30, 2021 ರಂದು ಕೆಟಿಆರ್ ಅಧಿಕಾರಿಗಳಿಂದ ಅನುಮತಿ ನೀಡಲಾಗಿದೆ. ಹಳಿಯಾಳ ವಿಭಾಗದಲ್ಲಿ ಬರುವ ರೈಲ್ವೆ ಮಾರ್ಗದ 0.88 ಹೆಕ್ಟೇರ್ ಅರಣ್ಯ ಪ್ರದೇಶದ 181 ಮರಗಳನ್ನು ಕಡಿಯಲು 28 ಎಪ್ರೀಲ್ 2021 ರಲ್ಲಿ ಹಳಿಯಾಳ ಅರಣ್ಯ ಇಲಾಖೆಯಿಂದ ಅನುಮತಿ ನೀಡಲಾಗಿದೆ.
ಹುಲಿ ಮತ್ತು ವನ್ಯ ಜೀವಸಂಕುಲದ ವೈವಿಧ್ಯತೆ ತಾಣವಾಗಿರುವ ಈ ಕಾಡು, ಪರಿಸರದ ಅತೀ ಸೂಕ್ಷ್ಮ ಪ್ರದೇಶ, ಆನೆ, ಹುಲಿ, ಚಿರತೆ, ಹಾರ್ನಬಿಲ್, ಕರಡಿ, ಕಡವೆ, ಸೀಳುನಾಯಿಗಳು ಸೇರಿದಂತೆ ಇಲ್ಲಿ ವಿನಾಶದ ಅಂಚಿನಲ್ಲಿರುವ ವಿವಿಧ ಪ್ರಾಣಿ, ಪಕ್ಷಿ, ಕೀಟಗಳ ಪ್ರಬೇಧಗಳು ಇವೆ. ಈಗ ಇರುವ ರೈಲ್ವೆ ಹಳಿಯಲ್ಲೇ ಕರಡಿ, ಕಾಡುಕೋಣ, ಕಡವೆ ಸೇರಿದಂತೆ ಅನೇಕ ಅಪರೂಪದ ಕಾಡುಪ್ರಾಣಿಗಳು ರೇಲ್ವೆಯಡಿ ಸಿಲುಕಿ ಸಾವನ್ನಪ್ಪಿದೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಈ ಭಾಗದಲ್ಲಿ ಅರಣ್ಯ ಇಲಾಖೆ ಅಳವಡಿಸಿದ ಕ್ಯಾಮರಾ ಟ್ರಾಪ್‍ನಲ್ಲಿ ಹಿಂದೆ ಒಟ್ಟೂ 8 ಹುಲಿಗಳು ಇರುವ ಬಗ್ಗೆಯೂ ದಾಖಲೆಯಲ್ಲಿದೆ. ವಿಶೇಷವಾಗಿ ಮಹಾರಾಷ್ಟ್ರದ ಸಹ್ಯಾದ್ರಿ ಟೈಗರ್ ರಿಸರ್ವ್‍ನಲ್ಲಿ 2018ರಲ್ಲಿ ಕ್ಯಾಮರಾ ಟ್ರಾಪ್ ನಲ್ಲಿ ಸಿಕ್ಕ ಗಂಡು ಹುಲಿಯೊಂದು 2020 ರಲ್ಲಿ 300 ಕಿ.ಮಿ ದೂರದ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಈ ವ್ಯಾಪ್ತಿಯಲ್ಲೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಮತ್ತೊಂದು ರೈಲ್ವೆ ಮಾರ್ಗ ನಿರ್ಮಾಣವಾದಲ್ಲಿ ಇನ್ನಷ್ಟು ಅರಣ್ಯ ನಾಶ ಮಾಡಿದರೆ ಇಲ್ಲಿಯ ಸಸ್ಯ ಸಂಕುಲ ವನ್ಯಜೀವಿಗಳ ವಾಸ ಸ್ಥಾನಕ್ಕೆ ಹಾಗೂ ಜೀವ ವೈವಿಧ್ಯಕ್ಕೆ ಮಾರಕವಾಗುವುದರಲ್ಲಿ ಸಂಶಯ ಇಲ್ಲ.
ಈಗ ಇರುವ ರೇಲ್ವೆ ಮಾರ್ಗದಲ್ಲಿಯೇ ಪ್ರತಿ ವರ್ಷ ಗುಡ್ಡ ಕುಸಿತವಾಗಿ ರೈಲ್ವೆ ಮಾರ್ಗ ಬಂದ್ ಆಗುತ್ತಿದೆ. ಮತ್ತೆ ಗುಡ್ಡ ಕೊರೆದು ಹೊಸ ಮಾರ್ಗ ಮಾಡಿದಲ್ಲಿ ಮುಂದೆ ಮತ್ತಷ್ಟು ಭೀಕರ ವಿನಾಶಕ್ಕೆ ದಾರಿ ಮಾಡಿದಂತಾಗುವುದಿಲ್ಲವೇ? ನಿರಂತರ ಮಳೆಯಾಗುವ ಇಲ್ಲಿನ ನೂರಾರು ಅಡಿಗಳಷ್ಟು ಇಲ್ಲಿನ ಬೆಟ್ಟ ಅಗೆದಲ್ಲಿ ಕೊಡಗಿನಲ್ಲಿ ಉಂಟಾದ ಅವಘಡದಂತೆ ಇಲ್ಲಿಯೂ ಭೂ ಕುಸಿತಕ್ಕೆ ದಾರಿಯಾಗುತ್ತದೆ. ಈಗ ಕಡಿಯುವ ಮರಗಳಿಗಿಂತ ಹೆಚ್ಚು ಮರಗಳು ಭೂ ಕುಸಿತದಿಂದ ನಾಶವಾಗಲಿದೆ.
ಈ ಅರಣ್ಯ ನಾಶಕ್ಕೆ ಅನುಮತಿ ನೀಡಿದ ಬಗ್ಗೆ ಅನೇಕ ಸಂಸ್ಥೆಗಳು ಗೋವಾ ಹಾಗೂ ಕರ್ನಾಟಕದ ಉಚ್ಚ ನ್ಯಾಯಾಲಯ ಹಾಗೂ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಯೋಜನೆಗೆ ನೀಡುವಂತಹ ಅನುಮತಿಯನ್ನು ರದ್ದುಪಡಿಸುವಂತೆ ಮಾನ್ಯ ನ್ಯಾಯಾಲಯಗಳನ್ನು ಕೇಳಿಕೊಂಡಿವೆ. ಸಿಇಸಿ ಯ ವರದಿ ನೀಡಿದ ನಂತರದ ಒಂದು ವಾರದ ಅವಧಿಯಲ್ಲೆ ಅರಣ್ಯ ಇಲಾಖೆಯ ಅಧಿಕಾರಿಗಳು ತರಾತುರಿಯಲ್ಲಿ 2278 ಮರಗಳನ್ನು ತೆಗೆಯಲು ಆದೇಶ ನೀಡಿದೆ. ಈ ಯೋಜನೆಗೆ ಎನ್.ಟಿ.ಸಿ.ಎ ಕೂಡ ಒಪ್ಪಿಗೆ ನೀಡಿಲ್ಲ. ಆದರೂ ಇಲ್ಲಿನ ಅರಣ್ಯ ಇಲಾಖೆಯ ಅಧಿಕಾರಿಗಳು ಮರ ಕಡಿತಕ್ಕೆ ನೀಡಿರುವ ಅನುಮತಿ ಹಿಂದೆ ಯಾವ ಉದ್ದೇಶ ಅಡಗಿದೆಯೋ ತಿಳಿಯುತ್ತಿಲ್ಲ. ನೂರಾರು ವರ್ಷಗಳಿಂದ ಇಲ್ಲಿನ ಅರಣ್ಯವಾಸಿಗಳಾದ ಜನರಿಗೆ ಇರುವ ಮೂಲ ಭೂತ ಸೌಕರ್ಯ ಅವಶ್ಯವಾದ ವಿದ್ಯುತ್, ಕುಡಿಯುವ ನೀರಿನ ಅಭಿವೃದ್ಧಿ ಕೆಲಸಗಳಿಗೆ, ಇರುವ ರಸ್ತೆಗಳಿಗೆ ಡಾಂಬರು ಹಾಕುವುದಕ್ಕೆ ಕಾನೂನು, ಪರಿಸರ ನಾಶ ಎಂದು ತೊಂದರೆ ಕೊಡುವ ಅರಣ್ಯ ಇಲಾಖೆಯ ಅಧಿಕಾರಿಗಳು ಈಗ ಸಾವಿರಾರು ಮರ ಕಡಿತಕ್ಕೆ ಯಾಕೆ ಕಣ್ಣು ಮುಚ್ಚಿ ಅನುಮತಿ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.
ಇನ್ನು, ಮರ ಕಡಿತಕ್ಕೆ ನೀಡಿರುವ ಅನುಮತಿಗೆ ಕಾಳಿ ಬ್ರಿಗೇಡ ಸಂಚಾಲಕ ರವಿ ರೇಡ್ಕರ ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ರಸ್ತೆಗಳಿಗೆ, ಕುಡಿಯುವ ನೀರಿನ ಪೈಪ್ ಲೈನ್‍ಗಳಿಗೆ ಅಡ್ಡಗಾಲು ಹಾಕುವ ಅರಣ್ಯ ರಕ್ಷಣೆಯ ಸೇವೆಯಲ್ಲಿರುವ ಈ ಅಧಿಕಾರಿಗಳು ಇಲ್ಲಿಯ ಅರಣ್ಯವಾಸಿಗಳ ಸಣ್ಣಪುಟ್ಟ ಸಮಸ್ಯೆಗಳಿಗೆ ಕಾನೂನಿನ ಹೆಸರಲ್ಲಿ ತೊಂದರೆ ಕೊಡುತ್ತಾರೆ. ಆದರೆ ಬಂಡವಾಳ ಶಾಹಿ ಲಾಬಿ ಪರ ಕೆಲಸ ಮಾಡುತ್ತ ವಿವಿಧ ಪರಿಸರ ವಿರೋಧಿ ಯೋಜನೆಗಳಿಗೆ ಸಹಕಾರ ನೀಡುತ್ತ, ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಸರಕಾರ ಗಮನ ಹರಿಸಿ ಕಾನೂನು ಬಾಹಿರವಾಗಿ ಮರ ಕಡಿಯಲು ಆದೇಶ ನೀಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇನ್ನು, ರೈಲ್ವೆ ಅಧಿಕಾರಿಗಳು ಈ ಯೋಜನೆಗೆ ಸಂಬಂಧಿಸಿದಂತೆ ಅನುಮತಿ ಪಡೆದಿದ್ದರು. ಅದರಂತೆ ಅರಣ್ಯ ಇಲಾಖೆಯಿಂದ ಮರಗಳನ್ನು ಕಡಿಯಲು ಅನುಮತಿ ನೀಡಲಾಗಿತ್ತು.ಇದಕ್ಕೆ ಸಿಇಸಿ ಆಕ್ಷೇಪಣೆ ಸಲ್ಲಿಸಿರುವ ಹಿನ್ನಲೆಯಲ್ಲಿ ಮರಗಳನ್ನು ಕಡಿಯಲು ನೀಡಿದ ಅನುಮತಿಯನ್ನು ಸದ್ಯ ರದ್ದು ಮಾಡಲಾಗಿದೆ ಎಂದು ಮಾರಿಯಾ ಡಿ ಕ್ರಿಸ್ತರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು ಕಾಳಿ ಹುಲಿ ಸಂರಕ್ಷಿತ ಪ್ರದೇಶ ದಾಂಡೇಲಿ ಇವರು ತಿಳಿಸಿದ್ದಾರೆ.