
ಕುಮಟಾ: ಕೋವಿಡ್‍ನಿಂದ ಆಮ್ಲಜನಕದ ಕೊರತೆಯುಂಟಾದಾಗ ಪ್ರಕೃತಿಯ ಕೊಡುಗೆಯ ಬಗ್ಗೆ ಪ್ರತಿಯೊಬ್ಬರಿಗೂ ಮನವರಿಕೆಯಾಗಿದ್ದು, ಪ್ರಕೃತಿಯ ಉಳಿವಿಗೆ ನಾವೆಲ್ಲರೂ ಶ್ರಮಿಸಬೇಕಿದೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.
ದಿ. ಡಾ.ಶ್ಯಾಮಪ್ರಸಾದ ಮುಖರ್ಜಿಯವರ ಬಿಲಿದಾನ ದಿನದ ಸಂಸ್ಮರಣಾರ್ಥ ತಾಲೂಕಿನ ಹೆಗಡೆಯಲ್ಲಿ ಬಿಜೆಪಿ ಜಿಲ್ಲಾ ವೃಕ್ಷಾರೋಪಣ ಸಮಿತಿಯು ಆಯೋಜಿಸಿದ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ, ಅವರು ಮಾತನಾಡಿದರು. ದಿ.ಡಾ.ಶ್ಯಾಮಪ್ರಸಾದ ಮುಖರ್ಜಿಯವರು ಈ ನಾಡು ಕಂಡ ವಿಶೇಷ ದೇಶಪ್ರೇಮಿ. ಇಂತಹ ಚೇತನಗಳು ಪ್ರತಿಯೊಬ್ಬರಿಗೂ ಸ್ಫೂರ್ತಿ. ಇವರ ಬಲಿದಾನ ದಿನದ ಸಂಸ್ಮರಣೆಗಾಗಿ ರಾಜ್ಯದಾದ್ಯಂತ ವೃಕ್ಷಾರೋಪಣ ಕಾರ್ಯಕ್ರಮ ನಡೆಯುತ್ತಿದ್ದು, ನಮ್ಮ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಸಿ ನೆಡುವ ಮೂಲಕ ಪರಿಸರವನ್ನು ಉಳಿಸಬೇಕಿದೆ ಎಂದರು.
ವೃಕ್ಷಾರೋಪಣ ಸಮಿತಿಯ ಜಿಲ್ಲಾ ಸಂಚಾಲಕ ನಾಗರಾಜ ನಾಯಕ ತೊರ್ಕೆ ಮಾತನಾಡಿ, ಪರಿಸರದ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪಕ್ಷದ ಪ್ರಮುಖರ ಸೂಚನೆಯಂತೆ ರಾಜ್ಯದಲ್ಲಿ 1 ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಟ್ಟು ಬೆಳೆಸಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಮುಖಂಡರಾದ ವಿನೋದ ಪ್ರಭು, ಡಾ. ಜಿ.ಜಿ.ಹೆಗಡೆ, ಪ್ರಶಾಂತ ನಾಯ್ಕ, ಜಿ.ಎಸ್.ಗುನಗಾ, ವಿಶ್ವನಾಥ ನಾಯ್ಕ, ಮಾಜಿ ಮಂಡಲಾಧ್ಯಕ್ಷ ಕುಮಾರ ಮಾರ್ಕಾಂಡೆ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯಾ ಶೇಟ್, ಗ್ರಾ.ಪಂ ಅಧ್ಯಕ್ಷರು ಸೇರಿದಂತೆ ಪಕ್ಷದ ಕಾರ್ಯಕರ್ತರಿದ್ದರು