ಹೊನ್ನಾವರ: ತಾಲೂಕಿನ ಶ್ರೀದೇವಿ ಆಸ್ಪತ್ರೆಯ ಎದುರಿಗಿನ ರಾಷ್ಟ್ರೀಯ ಹೆದ್ದಾರಿಯ ಕೆಳಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು, ನಿರ್ವಹಣೆ ಮಾಡದೇ ಹೆದ್ದಾರಿ ಪ್ರಾಧಿಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ.
ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಶರಾವತಿ ಸಮೀಪ ಕೆಳಗಿನ ಪಾಳ್ಯ ರಸ್ತೆಯಿಂದ ಬಂದರ್ ರಸ್ತೆವರೆಗೆ ಕೆಳಸೇತುವೆ ನಿರ್ಮಿಸಲಾಗಿದೆ. ಮಾಹಿತಿಗಳ ಪ್ರಕಾರ 1966 ರಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಭೂಸ್ವಾಧೀನ ಮಾಡಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ಈ ಕೆಳಸೇತುವೆ ಸುಮಾರು 50 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಸೇತುವೆಗೆ ಅಳವಡಿಸಿರುವ ಕಬ್ಬಿಣದ ಸರಳುಗಳಿಗೆ ತುಕ್ಕು ಹಿಡಿದು ಬಿರುಕು ಬಿಟ್ಟಿದ್ದು ದೊಡ್ಡ ಅನಾಹುತಕ್ಕೆ ಎಡೆಮಾಡಿ ಕೊಡಲು ಸಜ್ಜಾದಂತಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಪ್ರಮಾಣದ ವಾಹನಗಳು ಸಂಚರಿಸುತ್ತದೆ. ಶರಾವತಿ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸಿ ಹಲವು ವರ್ಷ ಕಳೆದರೂ ಹಳೆ ಸೇತುವೆ ಅಭಿವೃದ್ಧಿಪಡಿಸದೇ ಒಂದೇ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಅನುವು ಮಾಡಲಾಗಿದೆ. ಹೆದ್ದಾರಿ ಮೇಲ್ದರ್ಜೆಗೆರಿಸಲು ಖಾಸಗಿ ಕಂಪನಿಗೆ ಗುತ್ತಿಗೆ ನೀಡಿರುವುದರಿಂದ ಹೆದ್ದಾರಿ ಪ್ರಾಧಿಕಾರ ಯಾವುದೇ ನಿಗಾ ವಹಿಸದೇ ಇದ್ಯಾವುದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿದೆ.
ಕೆಳಸೇತುವೆ ನಿರ್ಮಾಣ ಮಾಡಿ 50ಕ್ಕೂ ಅಧಿಕ ವರ್ಷವಾಗಿದೆ. ಆದರೂ ಕೂಡ ಇಲ್ಲಿಯವರೆಗೆ ಸಂಬಂಧಪಟ್ಟ ಇಲಾಖೆ ಯಾವುದೇ ನಿರ್ವಹಣೆ ಕಾರ್ಯ ಮಾಡಿಲ್ಲ. ಈಗ ಸೇತುವೆ ಶಿಥಿಲಾವಸ್ಥೆ ಬಂದಿದೆ. ಸೇತುವೆಯ ಮೇಲೆ ಭಾರಿ ಪ್ರಮಾಣದ ವಾಹನಗಳು ಓಡಾಡುತ್ತವೆ. ಒಂದು ವೇಳೆ ಸೇತುವೆ ಕುಸಿದರೆ ಹೆದ್ದಾರಿಯ ಸಂಚಾರ ಸ್ಥಗಿತಗೊಳ್ಳುತ್ತದೆ. ಸೇತುವೆಯ ಕೆಳಗಡೆ ಸಂಚರಿಸುವವರ ಪ್ರಾಣಕ್ಕೆ ಹಾನಿಯಾದರೆ ಯಾರು ಹೊಣೆ ಹೊತ್ತುಕೊಳ್ಳುತ್ತಾರೆ…? – ಪ್ರಜ್ಞಾವಂತ ನಾಗರಿಕರು, ಹೊನ್ನಾವರ.