ಬೆಂಗಳೂರು: ಕರ್ನಾಟಕದಲ್ಲಿ ವಾಹನ ಚಾಲಕರ ನಿಗಮ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಈ ಬಗ್ಗೆ ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವ ಸಿ.ಎನ್ ಅಶ್ವಥನಾರಾಯಣ ಅವರು ಮಾಹಿತಿ ನೀಡಿದ್ದಾರೆ.
ಆಟೋ ಚಾಲಕರಿಗೆ ಸಿಎನ್‌ಜಿ ಕಿಟ್ ಪರಿವರ್ತನೆಗೆ ಸಬ್ಸಿಡಿ ನೀಡುವ ಸಂಬಂಧವೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ದೇಶದಲ್ಲಿ ಸದ್ಯದಲ್ಲೇ ವಿದ್ಯುತ್ ಮತ್ತು ಎಥೆನಾಲ್ ಮುಂತಾದ ಜೈವಿಕ ಇಂಧನಗಳಿಂದ ಓಡಾಡುವ ಆಟೋ ಮತ್ತಿತರ ವಾಹನಗಳು ಜನಪ್ರಿಯವಾಗುತ್ತಿವೆ. ಎಲೆಕ್ಟ್ರಿಕ್ ಆಟೋಗಳ ಉತ್ಪಾದನೆಗೆ ಹತ್ತಾರು ಕಂಪನಿಗಳು ಆಸಕ್ತಿ ತೋರಿಸುತ್ತಿವೆ. ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಗಣನೀಯವಾಗಿ ಇಳಿಕೆಯಾಗಲಿದೆ. ವಾಹನ ಚಾಲಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.
ವಾಹನ ಕ್ಷೇತ್ರದಲ್ಲಿ ಪೆಟ್ರೋಲ್, ಡೀಸೆಲ್‌ಗೆ ಪರ್ಯಾಯವಾಗಿ ಎಥೆನಾಲ್, ಗ್ರೀನ್ ಹೈಡ್ರೋಜನ್ ಮುಂತಾದ ಜೈವಿಕ ಇಂಧನಗಳನ್ನು ಉತ್ತೇಜಿಸಲಾಗುತ್ತಿದೆ. ಇದರ ನಿಮಿತ್ತವಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಜನವರಿ 10ರಂದು ಬೆಂಗಳೂರಿನಲ್ಲಿರುವ ಪರಿಸರಸ್ನೇಹಿ ಜಲಜನಕ ಉತ್ಪಾದನಾ ಘಟಕಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.