ಶಿರಸಿ: ಭಾರತೀಯ ಸಂಸ್ಕೃತಿಗೆ ಅನುರೂಪವಾಗಿ ರಾಜಕೀಯ ಶಕ್ತಿಯನ್ನು ನಿರ್ಮಿಸಿದ ಕೀರ್ತಿ ದಯಾಳರಿಗೆ ಸಲ್ಲಬೇಕು. ದೇಶದ ಸಾಮಾಜಿಕ-ರಾಜಕೀಯ ವ್ಯವಸ್ಥೆಗೆ ಪಂಡಿತರು ಹಾಕಿದ್ದ ಭದ್ರ ಬುನಾದಿಯ ಪ್ರತಿಫಲನವನ್ನು ಇಂದು ನಾವು ಕಾಣಬಹುದು ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಸುಶಾಸನ ದಿನದ ಅಂಗವಾಗಿ ಶಿರಸಿಯಲ್ಲಿ ಪಂಡಿತ್ ದೀನ ದಯಾಳ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಪಂಡಿತ್ ದೀನ ದಯಾಳ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕಳೆದ 11 ವರ್ಷಗಳಿಂದ ದೀನ ದಯಾಳ ಟ್ರಸ್ಟ್ ಕೆಲಸ ಮಾಡುತ್ತಿದೆ. ಸಮಾಜದಲ್ಲಿ ಒಳ್ಳೆಯ ಕೆಲಸಕ್ಕೆ ಪ್ರೇರಣೆ ನೀಡುವ ಸ್ಥಳ ಈ ಸಮುದಾಯ ಭವನವಾಗಬೇಕು. ದೀನ ದಯಾಳರ ತ್ಯಾಗ ಜೀವನ ಸಾರ್ಥಕತೆ ಈ ಭವನದಲ್ಲಿ ಕಾಣಬೇಕು ಎಂದರು. ರಾಷ್ಟ್ರದ ಕೋಟ್ಯಾಂತರ ಜನತೆಗೆ ಪಂಡಿತರು ಪ್ರೇರಕ ಶಕ್ತಿಯಾಗಿದ್ದು, ಉದಾತ್ತ ವಿಚಾರಕ್ಕಾಗಿ ಸಮರ್ಪಣಾ ಬದುಕನ್ನು ನಡೆಸಿದವರು ಎಂದರು.
ಇಂದು ದೇಶದಾದ್ಯಂತ ಸುಶಾಸನ ದಿನವನ್ನು ಆಚರಿಸಲಾಗುತ್ತಿದೆ. ಮಾಜಿ ಪ್ರಧಾನಿ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಹಾಗು ಪಂಡಿತ್ ಮದನಮೋಹನ ಮಾಳವೀಯ ಅವರ ಜನ್ಮದಿನವೂ ಆಗಿದೆ. ಈ ಮಹಾಪುರುಷರ ತ್ಯಾಗದ ದೀಪ ಸದಾ ಉನ್ನತ ವಿಚಾರಗಳಿಗಾಗಿ ಪ್ರಜ್ವಲಿಸುತ್ತಿರುತ್ತದೆ ಎಂದರು.
ಭಾಜಪಾ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಸಾಮಾಜಿಕ ಕಾರ್ಯದ ಮೂಲಕ ದೀನ ದಯಾಳ ಟ್ರಸ್ಟ್ ಈ ಭಾಗದಲ್ಲಿ ಮನೆಮಾತಾಗಿದೆ. ಸಮಾಜದ ಅಂತಿಮ ವ್ಯಕ್ತಿಯ ಉನ್ನತಿಗೆ ಈ ಕಟ್ಟಡದ ಬಳಕೆ ನಡೆಯಬೇಕು. ಉಪಾಧ್ಯಾಯರ ಹಾಗು ಶ್ಯಾಂ ಪ್ರಸಾದ ಮುಖರ್ಜಿಯವ ಜೀವನದ ಧ್ಯೇಯದ ಮೇಲೆ ನಾವೆಲ್ಲರೂ ಕೆಲಸ ಮಾಡುವಂತಾಗಬೇಕು ಎಂದರು.
ವಿಧಾನ ಪರಿಷತ್ ಶಾಸಕ ಶಾಂತಾರಾಮ ಸಿದ್ದಿ ಮಾತನಾಡಿ, ಅಂತ್ಯೋದಯದ ಕಲ್ಪನೆಯನ್ನು ನಮ್ಮೆಲ್ಲರಲ್ಲಿ ತುಂಬಿ ನಮ್ಮನ್ನು ಜಾಗೃತಗೊಳಿಸಿದವರು ಪಂಡಿತ್ ದೀನ ದಯಾಳರು. ಈ ಕಟ್ಟಡದ ಪ್ರಯೋಜನ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುವಂತಾಗಲಿ ಎಂದರು.
ನಾವು ನಿರ್ಲಕ್ಷಿಸುವ ಸಮಾಜದಲ್ಲಿ ರಾಷ್ಟ್ರವಿರೋಧಿ ಶಕ್ತಿಗಳು ತಮ್ಮ ಪ್ರಾಬಲ್ಯ ಮೆರೆಯುತ್ತವೆ. ಹಾಗಾಗಿ ಸಮಾಜದ ಯಾವ ವರ್ಗವನ್ನು ನಿರ್ಲಕ್ಷಿಸದೇ, ಸರ್ವರನ್ನೂ ಒಗ್ಗೂಡಿಸುವ ಪ್ರಯತ್ನ ನಮ್ಮಿಂದಾಗಲಿ ಎಂದರು.
ದೀನ ದಯಾಳ ಸಮುದಾಯ ಭವನವನ್ನು ಕಟ್ಟಲು ಶ್ರಮಿಸಿದ ಕಾರ್ಮಿಕ ಬಂಧುಗಳನ್ನು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಲು ಹೊದೆಸಿ ಸನ್ಮಾನಿಸಿದರು. ಕಾಶಿಯಲ್ಲಿ ಪ್ರಧಾನಿ ಮೋದಿ ಇತ್ತಿಚಿಗಷ್ಟೇ ವಿಶ್ವನಾಥ ಮಂದಿರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದ ಶ್ರಮಿಕರನ್ನು ಗೌರವಿಸಿ, ಅವರೊಡಗೂಡಿ ಭೋಜನ ನಡೆಸಿದ್ದರ ಪ್ರತಿಫಲನ ಈ ಕಾರ್ಯಕ್ರಮದಲ್ಲಿ ಕಂಡು ಬಂದಿತು ಎಂದರೆ ತಪ್ಪಾಗಲಾರದು.
ಭಾಜಪಾದ ಜಿಲ್ಲಾ ಸಹ ವಕ್ತಾರರಾದ ಸದಾನಂದ ಭಟ್ಟ ನಡುಗೋಡು ನಿರೂಪಿಸಿದರು. ಶ್ರೀರಾಮ ನಾಯ್ಕ ಸ್ವಾಗತಿಸಿದರು. ಹಿರಿಯ ಸಾಮಾಜಿಕ ಕಾರ್ಯಕರ್ತ ವಿ ಆರ್ ಹೆಗಡೆ ಹೊನ್ನೆಗದ್ದೆ, ಮಾಜಿ ಶಾಸಕ ಸುನೀಲ್ ಹೆಗಡೆ, ಸಂಸ್ಥೆಯ ಟ್ರಸ್ಟಿ ಎಸ್ ಎನ್ ಭಟ್ಟ ಬಿಸ್ಲಕೊಪ್ಪ, ವಿಭಾಗದ ಸಹ ಪ್ರಭಾರಿ ಎನ್ ಎಸ್ ಹೆಗಡೆ, ನಗರಸಭಾ ಅಧ್ಯಕ್ಷ ಗಣಪತಿ ನಾಯ್ಕ ಸೇರಿದಂತೆ ಇನ್ನಿತರರು ಇದ್ದರು.