ಮುಂಡಗೋಡ: ತಾಲೂಕಿನ ಟಿಬೇಟಿನ್ ಕ್ಯಾಂಪ್ಗೆ ಭೇಟಿ ನೀಡುವ, ಪ್ರವಾಸಿಗರ ಸಂಖ್ಯೆಯಲ್ಲಿ ಸತತ ಎರಡನೇ ವರ್ಷವೂ ಭಾರಿ ಇಳಿಕೆ ಕಂಡಿದೆ. ಎರಡು ವರ್ಷಗಳಿಂದ ಟಿಬೆಟನ್ ಧಾರ್ಮಿಕ ನಾಯಕ ದಲೈಲಾಮಾ ಅವರು, ಇಲ್ಲಿನ ಕ್ಯಾಂಪ್ಗಳಿಗೆ ಭೇಟಿ ನೀಡದಿರುವುದು ಕೂಡ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಲು ಕಾರಣವಾಗಿದೆ.
ಇಲ್ಲಿನ ಕ್ಯಾಂಪ್ನಲ್ಲಿ, ಹಲವು ಬೌದ್ಧ ಮೊನ್ಯಾಸ್ಟಿಗಳು ಇರುವ ಎರಡು ಲಾಮಾ ಕ್ಯಾಂಪ್ಗಳಿವೆ. ಇತರ ಟಿಬೆಟನ್ನರು ವಾಸಿಸುವ ಒಂಬತ್ತು ಕಾಲೊನಿಗಳಿವೆ. ಇಲ್ಲಿನ ಬೌದ್ಧಮಂದಿರಗಳಲ್ಲಿ ಕಂಡುಬರುವ ವಿಶಿಷ್ಟ ಶಿಲ್ಪಕಲೆ, ವಿಶಾಲವಾದ ಮಂದಿರ, ಧ್ಯಾನಸ್ಥನಾಗಿ ಕುಳಿತಿರುವ ಬುದ್ಧನ ದೊಡ್ಡ ವಿಗ್ರಹ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ‘ಮಿನಿ ಟಿಬೆಟ್’ನಂತೆ ಗೋಚರಿಸುವ, ತಾಲೂಕಿನ ಟಿಬೆಟನ್ ಕ್ಯಾಂಪ್ ಪ್ರವಾಸಿಗರು ಕಣ್ಣುಂಬಿಕೊಳ್ಳುವ ಧಾರ್ಮಿಕ ನೆಲೆಯಾಗಿದೆ. ಅದರಲ್ಲಿಯೂ ವಿದೇಶಿ ಬೌದ್ಧ ಅನುಯಾಯಿಗಳು, ಪ್ರತಿ ವರ್ಷ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಬೌದ್ಧ ಧರ್ಮವನ್ನು ಅನುಸರಿಸುವ ಹಾಗೂ ದಲೈಲಾಮಾ ಅವರನ್ನು ಹಿಂಬಾಲಿಸುವ ವಿದೇಶಿಗರ ಸಂಖ್ಯೆ ಹೆಚ್ಚಾಗಿದ್ದರಿಂದಲೂ ಸಹ, ಪ್ರವಾಸಿಗರ ಸಂಖ್ಯೆ ಏರಿಕೆ ಆಗತೊಡಗಿತ್ತು ಎಂದು ಟಿಬೆಟಿಯನ್ನರು ಹೇಳುತ್ತಾರೆ.
ಸ್ಥಳೀಯರನ್ನು ಹೊರತುಪಡಿಸಿದರೆ, ಇತರ ಜಿಲ್ಲೆ ಹಾಗೂ ರಾಜ್ಯಗಳಿಂದ ದೇಶಿಯ ಪ್ರವಾಸಿಗರು, ಟಿಬೆಟನ್ ಕ್ಯಾಂಪ್ಗೆ ಭೇಟಿ ನೀಡಿ ವೀಕ್ಷಿಸುತ್ತಾರೆ. ವರ್ಷದ ಕೊನೆಯ ಮೂರು ತಿಂಗಳಲ್ಲಿ ಹಾಗೂ ಏಪ್ರಿಲ್, ಮೇ ತಿಂಗಳಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆ ಇಲ್ಲಿ ಹೆಚ್ಚಿರುತ್ತಿತ್ತು. ಅದರಲ್ಲಿಯೂ ದಲೈಲಾಮಾ ಅವರ ಕಾರ್ಯಕ್ರಮಗಳಿದ್ದರೆ, ವಿದೇಶಿ ಅನುಯಾಯಿಗಳ ಸಂಖ್ಯೆ ದುಪ್ಪಟ್ಟಾಗಿರುತ್ತಿತ್ತು. ಕೋವಿಡ್ ಆತಂಕ ಹಾಗೂ ದಲೈಲಾಮಾ ಕಾರ್ಯಕ್ರಮಗಳು ಇಲ್ಲದಿರುವುದು, ಕ್ಯಾಂಪ್ನಲ್ಲಿ ವಿದೇಶಿಗರ ಭೇಟಿಗೆ ತಡೆಯೊಡ್ಡಿದೆ. ‘ಕೋವಿಡ್ ನಂತರದ ದಿನಗಳಲ್ಲಿ, ಕ್ಯಾಂಪ್ನ ಬಹುತೇಕ ಬೌದ್ಧ ಮಂದಿರಗಳು ಮುಚ್ಚಿದ್ದವು. ರಾಜ್ಯದ ಎಲ್ಲೆಡೆ ಪ್ರಾರ್ಥನಾ ಮಂದಿರಗಳು ಭಕ್ತರಿಗೆ ತೆರೆದುಕೊಂಡರೂ ಟಿಬೆಟನ್ ಕ್ಯಾಂಪ್ನಲ್ಲಿ ಮಾತ್ರ ಬೌದ್ಧ ಮಂದಿರಗಳಿಗೆ ಬೀಗ ಹಾಕಿರುವುದು ಐದಾರು ತಿಂಗಳವರೆಗೆ ಮುಂದುವರಿದಿತ್ತು. ಒಂದರ್ಥದಲ್ಲಿ ಸ್ವಯಂ ಪ್ರೇರಿತ ಲಾಕ್ಡೌನ್ಗೆ ಟಿಬೆಟನ್ ಕ್ಯಾಂಪ್ ಹೆಚ್ಚು ಒಳಪಟ್ಟಿತ್ತು’ ಎಂದು ಬೌದ್ಧ ಮುಖಂಡ ಜಂಪಾ ಲೋಬ್ಬಂಗ್ ಹೇಳಿದರು.
ಇದರಿಂದ, ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡಿತ್ತು. ಈ ವರ್ಷವೂ ಕೆಲವು ತಿಂಗಳು ಹೊರತುಪಡಿಸಿದರೆ, ಉಳಿದ ತಿಂಗಳು ಬೌದ್ಧ ಮಂದಿರಗಳು ಮುಚ್ಚಿದ್ದವು. ಕೋವಿಡ್ ಎರಡನೇ ಅಲೆ ಸೃಷ್ಟಿಸಿದ ಭಯ ಹಾಗೂ ರೂಪಾಂತರಿ ತಳಿಯ ಆತಂಕದಲ್ಲಿಯೇ ಈ ವರ್ಷವೂ ಮುಗಿದಿದೆ ಎಂದರು.