ಮುಂಡಗೋಡ: ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘವು 2020-21ರಲ್ಲಿ 70 ಲಕ್ಷ ನಷ್ಟದಲ್ಲಿದೆ. ಇಲ್ಲಿಯ ಟಿ.ಎ.ಪಿ.ಸಿ.ಎಮ್.ಎಸ್ ಸಭಾ ಭವನದಲ್ಲಿ ಇಂದು ನಡೆದ ಸಂಘದ 64 ನೇ ವಾರ್ಷಿಕ ವರದಿ ಮಂಡನಾ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಯಿತು.
ಕಳೆದ ನಾಲ್ಕು ವರ್ಷದಿಂದ ಮಾರ್ಕೆಟಿಗ್ ಸೊಸೈಟಿಯು ಲಾಭದಲ್ಲಿತ್ತು, 2016-17 ರಲ್ಲಿ 6.65 ಲಕ್ಷ, 2017-18 ರಲ್ಲಿ 8.81, 2018-19 8. 94, 2019-20 ರಲ್ಲಿ 7.31 ಲಕ್ಷ ಲಾಭಗಳಿಸಿತ್ತು. ಆದರೆ ಈ ವರ್ಷ ಮಾತ್ರ ನಾಲ್ಕು ವರ್ಷದ ಲಾಭವನ್ನು ಹಿಂದಿಕ್ಕಿ ಅದರ ಎರಡುವರೆ ಪಟ್ಟಿನಷ್ಟು ನಷ್ಟದತ್ತ ಸಾಗಿರುವುದು ಶೇರುದಾರ ರೈತ ಸದಸ್ಯರಲ್ಲಿ ಆತಂಕವನ್ನುಂಟು ಮಾಡಿದೆ. ಮಾರ್ಕೆಟಿಂಗ್ ಸೊಸೈಟಿಯ ವ್ಯಾಪ್ತಿಯಲ್ಲಿ ಅಕ್ಕಿಗಿರಣಿ, ಬಟ್ಟೆ ವಿಭಾಗ, ಸೇರಿದಂತೆ ಇಲೆಕ್ಟ್ರಾನಿಕ್ಸ್, ಸ್ಟೇಷನರಿ, ಪಾದರಕ್ಷೆ, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಕೃಷಿ ಉಪಕರಣ ವಿಭಾಗಗಳಿವೆ. ಇಲ್ಲಿ2595 ಸದಸ್ಯರಿದ್ದು ಪ್ರತಿ ವರ್ಷ ಕೋಟಿಗಟ್ಟಲೇ ವ್ಯವಹಾರ ನಡೆಯುತ್ತದೆ ಆದರು ಸಂಘವು ನಷ್ಟ ಅನುಭವಿಸಲು ಕಾರಣವಾದರು ಏನು ಎಂಬುದನ್ನು ಬಹಿರಂಗ ಪಡಿಸುವಂತೆ ಶೇರುದಾರ ರೈತ ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು.
ಕಾನೂನು ಕ್ರಮಕ್ಕೆ ಒತ್ತಾಯ: 2015-16ರಲ್ಲಿ ಮಾರ್ಕೆಟಿಂಗ್ ಸೊಸೈಟಿಯ ಗೊಬ್ಬರ ವಿಭಾಗದಲ್ಲಿ 73 ಲಕ್ಷ ನಷ್ಟವನ್ನು ತೋರಿಸಿದ್ದಾರೆ. ಆದರೆ ಇಲ್ಲಿಯ ವರೆಗೂ ಆ ಹಣವನ್ನು ಸಂಘಕ್ಕೆ ಮರಳಿ ತುಂಬಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಬಡ್ಡಿ ಸೇರಿದರೆ ಸುಮಾರು ಒಂದು ಕೋಟಿ ರುಪಾಯಿ ಸಂಘಕ್ಕೆ ಬರುವುದು ಬಾಕಿ ಇದೆ. ಇದಕ್ಕಾಗಿ ಹಿಂದಿನ ಆಡಳಿತ ಮಂಡಳಿಯ ನಿರ್ದೇಶಕರುಗಳು ಹಾಗೂ ಅಂದಿನ ವ್ಯವಸ್ಥಾಪಕ ಸುಭಾಷ ವಡ್ಡರ ಇವರೆಲ್ಲರ ಆಸ್ತಿಯ ಮೇಲೆ ಭೋಜಾ ದಾಖಲಿಸಲು ಸಕ್ಷಮ ಪ್ರಾಧಿಕಾರದಿಂದ 15 ದಿಗಳವರೆಗೆ ಅನುಮತಿ ಪಡೆಯಬೇಕು.ಹಣ ವಸೂಲಿ ಮಾಡಲು ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಲು ಮತ್ತೊಮ್ಮೆಸರ್ವ ಸದಸ್ಯರ ಸಭೆಯನ್ನು ಕರೆಯಬೇಕು. ಆ ಸಭೆಯಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರನ್ನು ಆಹ್ವಾನಿಸಬೇಕು ಎಂದು ರೈತ ಮುಖಂಡರಾದ ಉಮೇಶ ಬಿಜಾಪುರ,ಎಲ್.ಟಿ.ಪಾಟೀಲ, ಮಲ್ಲಿಕಾರ್ಜುನ ಕುಟ್ರಿ, ಡಿ.ಎಪ್.ಮಡ್ಡಿ, ಬಿ.ಕೆ.ಪಾಟೀಲ ಸೇರಿದಂತೆ ಹಲವು ರೈತರು ಒತ್ತಾಯಿಸಿದರು.