ಸಿದ್ದಾಪುರ: ಯಕ್ಷಗಾನ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕವಾಗಿದ್ದು ಯಕ್ಷಗಾನ ಕಲೆ ಹಾಗೂ ಕಲಾವಿದರುಗಳನ್ನು ಗುರುತಿಸಿ ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.
ಅವರು ತಾಲೂಕಿನ ತ್ಯಾಗಲಿಯ ಶ್ರೀ ಲಕ್ಷ್ಮಿ ನರಸಿಂಹ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಯಕ್ಷಗಾನ ಕಲಾವಿದರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಕಲಾವಿದರನ್ನು ಸನ್ಮಾನಿಸಿ ನಂತರ ಮಾತನಾಡಿ ಅವರು ಯಕ್ಷಗಾನದಲ್ಲಿ ಇಂದಿಗೂ ಜನಪದದ ಸೊಗಡು ಇದೆ. ಇದು ಆರಂಭದಲ್ಲಿ ಬುಡಕಟ್ಟು ಕಲೆಯಾಗಿದ್ದು, ಇದೀಗ ಸಾಂಸ್ಕೃತಿಕರಣಗೊಳಿಸಿದ ಕಲೆಯಾಗಿದೆ. ಕರ್ನಾಟಕದಲ್ಲಿ ಕನ್ನಡ ಅಸ್ಥಿತ್ವ ಉಳಿದಿದ್ದು ಯಕ್ಷಗಾನದಿಂದಲೇ. ಉಳಿಕ ಕಲೆ ಕನ್ನಡವನ್ನು ನಾಶ ಮಾಡುತ್ತಿದೆ. ಅಲ್ಲದೇ ಈ ಕಲೆ ಸಾಂಸ್ಕೃತಿಕ ಸೊಗಡನ್ನು ಹೆಚ್ಚಿಸುತ್ತಿದ್ದು ಜಾಗತೀಕ ಮಟ್ಟದಲ್ಲಿಯೂ ಇದರ ಕಂಪನ್ನು ಪಸರಿಸಿದೆ.
ಅನೇಕ ತತ್ತ್ವ, ಪರಾಮಾರ್ತಿಕ ವಿಚಾರಗಳನ್ನು ಸರಳವಾಗಿ ತಮ್ಮ ಮಾತು, ನೃತ್ಯದ ಮೂಲಕ ಲೌಕಿಕ ಜಗತ್ತಿಗೆ ತಿಳಿಸುವಂತದ್ದು ಅತ್ಯಂತ ಪ್ರಾಚೀನ ಹಾಗೂ ಪವಿತ್ರ ಯಕ್ಷಗಾನ. ಯಕ್ಷಗಾನ ಕಲಾವಿದರು ತಮ್ಮ ಸರ್ವಾಂಗೀಣ ಅಭಿನಯದ ಮೂಲಕ ಅನಕ್ಷರಸ್ಥರು ಕೂಡ ಹಿಂದಿನ ಪರಂಪರೆಯನ್ನು ಅರ್ಥೈಸಿಕೊಳ್ಳುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಕನ್ನಡವನ್ನು ಉಳಿಸುವ ಕಾರ್ಯ ಮಾಡುತ್ತಿರುವವರು ಯಕ್ಷಗಾನ ಕಲಾವಿದರು. ಸ್ವಚ್ಛ ಕನ್ನಡದಲ್ಲಿ ಮಾತನಾಡಿ, ಭಾಷೆಯ ಮೆರುಗನ್ನು ಇವರು ಹೆಚ್ಚಿಸುತ್ತಿದ್ದಾರೆ ಎಂದು ಪ್ರಶಂಶಿಸಿದರು.
ಕಾರ್ಯಕ್ರಮದಲ್ಲಿ ಅಶೋಕ್ ಭಟ್ ಸಿದ್ದಾಪುರ ಹಾಗೂ ಪ್ರಸಿದ್ಧ ಭಾಗವತರು ರಾಘವೇಂದ್ರ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸ್ಥಳಿಯ ಭಾಗದ ಪಂಚಾಯತ್ ಅಧ್ಯಕ್ಷರು, ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಅನೇಕ ಆ ಭಾಗದ ಪ್ರಮುಖರು ಹಿರಿಯರು ಕಲಾ ಅಭಿಮಾನಿಗಳು ಭಾಗವಹಿಸಿದರು.