ಹೊನ್ನಾವರ: ಬೆಳಗಾವಿ ಗಡಿ ಜಿಲ್ಲೆಯಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ ಹಾಗೂ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ದ್ವಂಸ ಮಾಡಿರುವ ಎಂ.ಇ.ಎಸ್. ಪುಂಡರ ಹಾವಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡ ಬಾವುಟವನ್ನು ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಧ್ವಂಸ ಮಾಡಲು ಯತ್ನಿಸಿದ ಎಂ.ಇ.ಎಸ್ ಪುಂಡರನ್ನು ಬಂಧಿಸಿ ಕಾನೂನಿನ ಶಿಕ್ಷೆಗೆ ಗುರಿಪಡಿಸಿ ಕನ್ನಡ ಧ್ವಜವನ್ನು ಅವಮಾನಿಸುವ ದುಸ್ಸಾಹಸಕ್ಕೆ ಇನ್ನು ಮುಂದೆ ಯಾರೇ ಕೈ ಹಾಕದಂತೆ ತಡೆಯಬೇಕು, ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ಕನ್ನಡನಾಡನ್ನು ಹಾಗೂ ಕನ್ನಡಿಗರನ್ನು ಅವಮಾನಿಸಲೆಂದೇ ಸರ್ಕಾರದ ಕೆಲ ಜನಪ್ರತಿನಿಧಿಗಳ ಹುಮ್ಮಸ್ಸಿನಿಂದಲೇ ಇಂತಹ ಕೃತ್ಯಗಳು ನಡೆದಿರುತ್ತದೆ. ಇದನ್ನು ಕರ್ನಾಟಕ ರಾಜ್ಯ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿ ಇಂತಹ ದುಷ್ಕೃತ್ಯ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು, ಕನ್ನಡ ನಾಡಿನ ಜನಪ್ರತಿನಿಧಿಗಳು ನಾಡಿನ ಹಿತದೃಷ್ಟಿಯಿಂದ ಐಕ್ಯಮತರಾಗಿ ವಿರೋಧಿಸಬೇಕು ಎಂದು ಮನವಿ ಮಾಡಿದ್ದಾರೆ.
ಬೆಳಗಾವಿಯ ಗಡಿ ವಿವಾದ ಈಗಾಗಲೇ ಇತ್ಯರ್ಥವಾಗಿರುವ ವಿಚಾರವಾದ್ದರಿಂದ ಇದನ್ನು ಪುನಃ ಕೆದುಕುವ ಅದರಿಂದ ಸಮಾಜದ ಸಾಮರಸ್ಯ ಕದಡುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತಿರುವುದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಕನ್ನಡ ನಾಡಿನ ಘನತೆಯನ್ನು ಎತ್ತಿ ಹಿಡಿಯಬೇಕು ಕ.ರ.ವೇ, ಹೊನ್ನಾವರ ತಾಲೂಕಾ ಘಟಕ ಅಧ್ಯಕ್ಷ ಉದಯರಾಜ ಮೇಸ್ತ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸುಭಾಶ ಹೊನ್ನಾವರ, ಗಣಪತಿ ಮೇಸ್ತ, ಶ್ರೀಕಾಂತ ಎಚ್, ಮೇಸ್ತ ಪ್ರದೀಪ ಆಚಾರ್ಯ ಉಪಸ್ಥಿತರಿದ್ದರು.