ಶಿರಸಿ: 2020-21ನೇ ಸಾಲಿನಲ್ಲಿ ಸರ್ಕಾರದ ಆದೇಶದಂತೆ ಮುಂಗಾರು ಅವಧಿಗೆ ಸಂಬಂಧಿಸಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಕ್ಷೇತ್ರಕ್ಕೆ ಕೆಡಿಸಿಸಿ ಬ್ಯಾಂಕು ಸಹಕಾರ ಸಂಘಗಳ ಮೂಲಕ ಒಟ್ಟು 39, 629 ಪ್ರಸ್ತಾವನೆಗಳನ್ನು ಬೆಳೆ ವಿಮೆ ವ್ಯಾಪ್ತಿಗೆ ಒಳಪಡಿಸಿದ್ದು ಇದರಲ್ಲಿ ರೈತರು ಹೊಂದಿರುವ 80,623 ಸರ್ವೆ ನಂಬರುಗಳಿಗೆ ಒಟ್ಟು ರೂ. 46 ಕೋಟಿ 78 ಲಕ್ಷ ವಿಮಾ ಪರಿಹಾರದ ರಖಂ ನೇರವಾಗಿ ಆಧಾರ ಲಿಂಕ್ಟ್ ಆದ ರೈತರ ಉಳಿತಾಯ ಖಾತೆಗಳಿಗೆ ಜಮಾ ಆಗಿದೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ರಾಜ್ಯ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳೆವಿಮಾ ಯೋಜನೆಯು ರೈತರಿಗೆ ವರದಾನವಾಗಿದ್ದು, ರೈತರು ಬೆಳೆ ವಿಮಾ ವ್ಯಾಪ್ತಿಗೆ ಒಳಪಡುವಂತೆ ತಿಳಿಸಲಾಗಿದೆ. ಕೆಲವು ರೈತರ ಉಳಿತಾಯ ಖಾತೆಗೆ ಆಧಾರ ಲಿಂಕ್ಟ್ ಆಗದೇ ಇರುವುದರಿಂದ ಬೆಳೆವಿಮಾ ಪರಿಹಾರದ ರಖಂ ಜಮಾ ಆಗಿಲ್ಲ. ಆಧಾರ ಲಿಂಕ್ ಆಗದೇ ಇರುವ ರೈತರು ಕೂಡಲೇ ಸಹಕಾರಿ ಸಂಘಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು ಬ್ಯಾಂಕಿನ ಉಳಿತಾಯ ಖಾತೆಗೆ ಆಧಾರ ಲಿಂಕ್ಸ್ ಮಾಡುವ ಬಗ್ಗೆ ಕ್ರಮ ಕೈಗೊಂಡು ವಿಮಾ ಪರಿಹಾರ ಪಡೆಯಲು ತಿಳಿಸಲಾಗಿದೆ.