ಶಿರಸಿ: ಲಯನ್ಸ್ ಕ್ಲಬ್ ಹಾಗೂ ಡಾ.ಎ.ಎನ್ ಪಟವರ್ಧನ ಫೌಂಡೇಶನ್ ಸಹಯೋಗದಲ್ಲಿ ಸರಕಾರಿ ಪ್ರೌಢಶಾಲೆ ಜಡ್ಡಿಗದ್ದೆ ಹಾಗೂ ಶ್ರೀ ಗಜಾನನ ಮಾಧ್ಯಮಿಕ ಶಾಲೆ ವಾನಳ್ಳಿಯಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಜೀವನ ಮೌಲ್ಯಗಳು ವಿಷಯದ ಮೇಲೆ ಶಿರಸಿಯ ಈಶ್ವರಿ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಬ್ರಹ್ಮಕುಮಾರಿ ವೀಣಾಜಿ ಅವರು ಉಪನ್ಯಾಸ ನೀಡಿದರು. ಮನಸ್ಸನ್ನು ಓದುವ ವಿಷಯದ ಕಡೆಗೆ ಕೇಂದ್ರೀಕರಿಸುವುದು ಹೇಗೆ, ದುಶ್ಚಟಗಳಿಂದ ದೂರವಿರುವುದು ಹೇಗೆ, ಕೋಪ ನಿಯಂತ್ರಣ, ಉನ್ನತ ಧ್ಯೇಯ ಹೊಂದುವುದು, ಹಳ್ಳಿಯಿಂದ ದೊಡ್ಡ ದೊಡ್ಡ ನಗರಕ್ಕೆ ವಿದ್ಯಾಭ್ಯಾಸಕ್ಕೆ ಹೋದಾಗ ಗಮನಿಸುವ ಸಂಗತಿಗಳಾವವು ಎಂಬ ವಿಷಯಗಳ ಕುರಿತು ಅವರು ಮಾತನಾಡಿದರು. ಶಿರಸಿ ಲಯನ್ಸ್ ಕ್ಲಬ್ ಉಪಾಧ್ಯಕ್ಷರು ಹಾಗೂ ಡಾ.ಎ.ಎನ್ ಪಟವರ್ಧನ ಫೌಂಡೇಶನ್ ಟ್ರಸ್ಟಿಗಳಾದ ಎಂ.ಜೆ.ಎಫ್. ಲಯನ್ ತ್ರಿವಿಕ್ರಮ ಪಟವರ್ಧನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷರಾದ ನಾರಾಯಣ ಭಟ್, ಶಿರಸಿ ಲಯನ್ಸ ಕ್ಲಬ್ ಖಜಾಂಚಿ ಲಯನ್ ಅನಿತಾ ಹೆಗಡೆ, ಲಯನ್ಸ್ ಕ್ಲಬ್ ಉಪಕಾರ್ಯದರ್ಶಿ ಲಯನ್ ರಮಾ ಪಟವರ್ಧನ, ಲಯನ್ ಸುಮಂಗಲಾ ಹೆಗಡೆ, ಸ್ಥಳೀಯರಾದ ರಮಾಕಾಂತ ಹೆಗಡೆ, ಜಡ್ಡಿಗದ್ದೆ ಶಾಲಾ ಮುಖ್ಯಾ ಉಪಸ್ಥಿತರಿದ್ದರು. ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು. ಡಾ.ಎ.ಎನ್ ಪಟವರ್ಧನ ಫೌಂಡೇಶನ್ ಪರವಾಗಿ ಎರಡೂ ಶಾಲೆಗಳ ಗ್ರಂಥಾಲಯಕ್ಕೆ `ಕರ್ಮಯೋಗಿ ವೈದ್ಯರತ್ನ ಬಾಳೂರಾಯರು’ ಕೃತಿಯನ್ನು ಕೊಡುಗೆಯಾಗಿ ನೀಡಲಾಯಿತು.