ಸಿದ್ದಾಪುರ: ಹಾಲು ಉತ್ಪಾದಕರು ಹಾಲಿನ ಗುಣಮಟ್ಟದ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕು. ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡಿದರೆ ಸಂಘದ ಅಭಿವೃದ್ಧಿಯೊಂದಿಗೆ ಹಾಲು ಉತ್ಪಾದಕರೂ ಸಹ ಆರ್ಥಿಕವಾಗಿ ಸುಧಾರಿಸಲು ಸಾಧ್ಯ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ ಬೇಡ್ಕಣಿ ಹೇಳಿದರು.
ಹಾರ್ಸಿಕಟ್ಟಾ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅವರು ಸೋಮವಾರ ಮಾತನಾಡಿದರು. ಹಾಲು ಹಾಕುವ ಪ್ರತಿಯೊಬ್ಬರೂ ಸಂಘದ ಶೇರುದಾರ ಸದಸ್ಯರಾಗಿ ಆ ಮೂಲಕ ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ಸದಸ್ಯರಾಗಿ ಸಂಘದಿಂದ ಸಿಗಬಹುದಾದ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಶಿರಸಿಯಲ್ಲಿ ಹಾಲಿನ ಪ್ಯಾಕಿಂಗ್ ಘಟಕ ಕೆಲವು ದಿನದಲ್ಲಿ ಪ್ರಾರಂಭಗೊಳ್ಳಲಿದೆ ಹಾಗೂ ಹಾಲಿನ ದರವೂ ಹೆಚ್ಚಳವಾಗಲಿದೆ ಎಂದು ಹೇಳಿದರು.
ಸಂಘದ ವಾರ್ಷಿಕ ವರದಿಯನ್ನು ಮಂಡಿಸಿದ ಸಂಘದ ಮುಖ್ಯಕಾರ್ಯನಿರ್ವಾಹಕ ರಮೇಶ ಹೆಗಡೆ ಹಾರ್ಸಿಮನೆ ಸಂಘ 2020-21ನೇ ಸಾಲಿನಲ್ಲಿ 54873ರೂಗಳಷ್ಟು ನಿವ್ವಳ ಲಾಭ ಹೊಂದಿದೆ ಎಂದು ಹೇಳಿ ಜಮಾ-ಖರ್ಚು, ಲಾಭ-ಹಾನಿ ಹಾಗೂ ಅಡಾವೆ ಪತ್ರಿಕೆಯನ್ನು ಓದಿ ಹೇಳಿದರು.
ಸಂಘಕ್ಕೆ 2020-21ನೇ ಸಾಲಿನಲ್ಲಿ ಅತಿ ಹೆಚ್ಚು ಹಾಲು ನೀಡಿದ ಗೋಪಾಲಕೃಷ್ಣ ದೇವರು ಹೆಗಡೆ ಊರತೋಟ, ಶ್ರೀಧರ ಭಟ್ಟ ಮಾಣಿಕ್ನಮನೆ, ಗಣೇಶ ಆರ್.ಹೆಗಡೆ ಊರ್ತೋಟ, ಸವಿತಾ ಗೌಡ ಹಾರ್ಸಿಕಟ್ಟಾ, ಎಂ.ಜಿ.ನಾಯ್ಕ ಹುಬ್ಬಗೈ ಹಾಗೂ ಮಹಾಬಲೇಶ್ವರ ನಾಯ್ಕ ಹುಬ್ಬಗೈ ಅವರಿಗೆ ಹಾಗೂ ಸಂಘಕ್ಕೆ ಹಾಲು ಪೂರೈಸಿದ ಎಲ್ಲ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು. ನಂತರ ಸಂಘದ ಅಭಿವೃದ್ಧಿ ಕುರಿತು ಸದಸ್ಯರು ಚರ್ಚೆ ನಡೆಸಿದರು.
ಸಂಘದ ಅಧ್ಯಕ್ಷ ಶ್ರೀಧರ ಭಟ್ಟ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಎಂ.ಜಿ.ನಾಯ್ಕ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು.