ಶಿರಸಿ: ಅರಣ್ಯವಾಸಿಗಳ ಪ್ರಮುಖ 10 ಸಮಸ್ಯೆಗಳಿಗೆ ಸರಕಾರದ ಗಮನ ಸೆಳೆಯವ ಉದ್ದೇಶದಿಂದ ಸಂಘಟಿಸಲಾದ ಡಿ. 22 ರ `ಬೆಳಗಾಂವ ಚಲೋ’ ಕಾರ್ಯಕ್ರಮಕ್ಕೆ ಜಿಲ್ಲಾದ್ಯಂತ ಬೃಹತ್ ಸಂಖ್ಯೆಯಲ್ಲಿ ಅರಣ್ಯವಾಸಿಗಳು ಭಾಗವಹಿಸುವರು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಅವರು ಇಂದು ಶಿರಸಿಯ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಡಿ 22-`ಬೆಳಗಾಂವ ಚಲೋ’ ಕಾರ್ಯಕ್ರಮದ ಲಾಂಛನ ಬಿಡುಗಡೆ ಮಾಡುತ್ತ ಮಾತನಾಡುತ್ತಿದ್ದರು. ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ವೈಫಲ್ಯ, ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ-ವಿಧಾನ ಅನುಸರಿಸದೇ ಜರಗುತ್ತಿರುವ ಮಂಜೂರಿ ಪ್ರಕ್ರೀಯೆ, ಅರಣ್ಯವಾಸಿಗಳಿಗೆ ಅತೀವೃಷ್ಟಿಯಿಂದ ಬರಗಾಲ ಸಂದರ್ಭದಲ್ಲಿ ಪರಿಹಾರ ನಿಡದೇ ಇರುವುದು, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿ ಸಂದರ್ಭದಲ್ಲಿ ಅಸಮರ್ಪಕ ಜಿಪಿಎಸ್‍ನ್ನು ಸರಿದೂಗಿಸುವುದು, ನಿರಂತರ ಅರಣ್ಯವಾಸಿಗಳ ಮೇಲೆ ಅರಣ್ಯ ಅಧಿಕಾರಿಗಳಿಂದ ಉಂಟಾಗುತ್ತಿರುವ ದೌರ್ಜನ್ಯ, ಸಕಾರಣ ವಿಲ್ಲದೇ ಅಭಯಾರಣ್ಯ ಪ್ರದೇಶ ವಿಸ್ತರಿಸುವುದು, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿ ಸಂದರ್ಭದಲ್ಲಿ ಅಸಮರ್ಪಕ ಜಿಪಿಎಸ್‍ನ್ನು ಸರಿದೂಗಿಸುವುದು, ವನ್ಯಪ್ರಾಣಿಗಳಿಂದ ಅರಣ್ಯವಾಸಿಗಳಿಗೆ ವಿಮೆ ಮತ್ತು ಬೆಳೆಸಾಲ ನೀಡುವುದು, ಅತೀವೃಷ್ಟಿಯಿಂದ ಉಂಟಾಗಿರುವ ವಾಸ್ತವ್ಯದ ಇಮಾರತ್ತು ರಿಪೇರಿಗೆ ಕಿರುಕುಳ ನೀಡುವುದು, 1978 ರ ಪೂರ್ವದ 2,513 ಕುಟುಂಬಗಳ ಅರಣ್ಯ ಒತ್ತುದಾರರ ಮಂಜೂರಿಗೆ ಅರ್ಹವಾಗಿರುವ ಅತಿಕ್ರಮಣದಾರರಿಗೆ ಹಕ್ಕು ಪತ್ರ ನೀಡುವದು ಹಾಗೂ ಅರ್ಜಿ ಸಲ್ಲಿಸಲು 1978 ರ ಪೂರ್ವದ ಒತ್ತುವರಿದಾರರಿಗೆ ಅವಕಾಶ ನೀಡಿ ಬಿಟ್ಟು ಹೊಗದಿರುವ ಪ್ರಕರಣ ಗುರುತಿಸಿ ಮಂಜೂರಿಗೆ ಕ್ರಮ ಜರುಗಿಸುವುದು, ಎಂಬ ಪ್ರಮುಖ 10 ಬೆಡೆಕೆಗಳನ್ನು ಸರಕಾರದ ಗಮನ ಸೆಳೆಯಲು ನಿರ್ಧರಿಸಲಾಗಿದೆ ಎಂದು ರವೀಂದ್ರ ನಾಯ್ಕ ತಿಳಿಸಿದರು.
ಅರಣ್ಯ ಇಲಾಖೆ ತನಿಖೆಗೆ ಆಗ್ರಹ: ಅರಣ್ಯ ಇಲಾಖೆಯು ಅರಣ್ಯ ಕ್ಷೇತ್ರದಲ್ಲಿ ಕಾಮಗಾರಿ ನೆಪದಲ್ಲಿ ಇತ್ತೀಚಿನ 5 ವರ್ಷದಲ್ಲಿ ಒಂದು ಲಕ್ಷಕ್ಕೂ ಮಿಕ್ಕಿ ಮರ ಕಡಿದಿರುವ ಕುರಿತು ಹಾಗೂ ಕಾಮಗಾರಿಯ ಪಾರದರ್ಶಕ್ಕೆ ವಿಶೇಷ ತನಿಖೆಗೆ ಒಳಪಡಿಸಲು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗೆ ಅಗ್ರಹಿಸಲಾಗುವುದು ಎಂದು ರವೀಂದ್ರ ನಾಯ್ಕ ತಿಳಿಸಿದರು.
ಸಭೆಯಲ್ಲಿ ರಾಜೇಶ ನೇತ್ರಕರ್, ರಾಜು ನರೇಬೈಲ್, ಮರ್ದಾನ ಸಾಬ್, ನಾಗರಾಜ ಮುಕ್ರಿ, ನಾಗರಾಜ ದೇವಸ್ತಳ್ಳಿ ಮುಂತಾದವರು ಉಪಸ್ಥಿತರಿದ್ದರು