ಶಿರಸಿ: ಇಲ್ಲಿನ ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ(ಟಿಆರ್‌ಸಿ)ಗೆ ಕೆಡಿಸಿಸಿ ಬ್ಯಾಂಕ್ ಕೊಡಮಾಡುವ 2020-21ನೇ ಸಾಲಿನ ಶಿರಸಿ ತಾಲೂಕಿನ ‘ಉತ್ತಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪ್ರಶಸ್ತಿ’ ಹಾಗೂ 2020-21ನೇ ಸಾಲಿನಲ್ಲಿ ಶೇಕಡಾ ನೂರಕ್ಕೆ ನೂರು ಸಾಲ ವಸೂಲಾತಿ ಸಾಧಿಸಿರುವುದಕ್ಕಾಗಿ ಟಿಆರ್‌ಸಿ ಮುಖ್ಯ ಕಾರ್ಯನಿರ್ವಾಹಕರಾದ ರಮೇಶ ಹೆಗಡೆ, ಬಾಳೆಗದ್ದೆ ಹಾಗೂ ಸಿಬ್ಬಂದಿಗಳಿಗೆ ವಿಶೇಷ ಬಹುಮಾನ ದೊರೆತಿದೆ.
ಟಿಆರ್‌ಸಿಗೆ ಕಳೆದ ಸತತ ನಾಲ್ಕು ವರ್ಷಗಳಿಂದ ಉತ್ತಮ ಸಹಕಾರಿ ಸಂಘ ಹಾಗೂ ಶೇಕಡಾ ನೂರರಷ್ಟು ಸಾಲ ವಸೂಲಾತಿಗಾಗಿ ವಿಶೇಷ ಪ್ರಶಸ್ತಿ ದೊರೆಯುತ್ತಿರುವುದು ಗಮನಾರ್ಹವಾಗಿದೆ.
2020-21ನೇ ಸಾಲಿನ ಪ್ರಶಸ್ತಿಯನ್ನು ಇಲ್ಲಿನ ಕೆಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯ ಸಭಾಭವನದಲ್ಲಿ ಶನಿವಾರ ನಡೆದ ಕೆಡಿಸಿಸಿ ಬ್ಯಾಂಕ್‌ನ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶಿವರಾಮ ಹೆಬ್ಬಾರ ಹಾಗೂ ಬ್ಯಾಂಕಿನ ನಿರ್ದೇಶಕರುಗಳು ಪ್ರಶಸ್ತಿ ಪ್ರದಾನ ಮಾಡಿದರು. ಟಿಆರ್‌ಸಿ ಅಧ್ಯಕ್ಷರಾದ ರಾಮಕೃಷ್ಣ ಹೆಗಡೆ, ಕಡವೆ ಹಾಗೂ ಮುಖ್ಯಕಾರ್ಯನಿರ್ವಾಹಕರಾದ ರಮೇಶ ಹೆಗಡೆ ಬಾಳೆಗದ್ದೆ ಪ್ರಶಸ್ತಿ ಸ್ವೀಕರಿಸಿದರು. ಎರಡೂ ಪ್ರಶಸ್ತಿಯು ಕ್ರಮವಾಗಿ ರೂ.10 ಸಾವಿರ ಹಾಗೂ ರೂ. 1500 ಮತ್ತು ಪ್ರಶಸ್ತಿ ಪತ್ರ ಒಳಗೊಂಡಿವೆ.