ಯಲ್ಲಾಪುರ: ವಿಕೇಂದ್ರಿಕರಣದ ಜನಪ್ರತಿನಿಧಿಗಳ ಚುನಾವಣೆ ಪರ್ವ ಮುಗಿದಿದೆ. ಆರಿಸಿ ಬಂದ 25 ವಿಧಾನ ಪರಿಷತ್ತು ಸದಸ್ಯರು ವಿಕೇಂದ್ರೀಕರಣ ಪಂಚಾಯತರಾಜ ವ್ಯವಸ್ಥೆ ಅಭಿವೃದ್ಧಿ ಕುರಿತು ಗಂಭೀರವಾಗಿ ಕೆಲಸ ಮಾಡಬೇಕಾಗಿದೆ. ಈ ಕುರಿತು ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿಯವರ ಅಧ್ಯಕ್ಷತೆ ಹಾಗೂ ವಿಧಾನಸಭಾ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆಯವರ ನೇತೃತ್ವದಲ್ಲಿ ಆಯ್ಕೆಯಾದ 25 ವಿಧಾನಪರಿಷತ್ ಸದಸ್ಯರಿಗೆ ಕಾರ್ಯಗಾರ ನಡೆಸಬೇಕು ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದ್ದಾರೆ.
ಅವರು ಶುಕ್ರವಾರ ಈ ಕುರಿತು ಪತಚರಿಕೆ ಹೇಳಿಕೆ ನೀಡಿ, 1983 ರ ಕಾಯ್ದೆ 1993 ರ ಕಾಯ್ದೆ, 1993 ರ ಗ್ರಾಮ ಸ್ವರಾಜ್ಯ ಕಾಯ್ದೆ ಅಲ್ಲದೇ 73 ಹಾಗೂ 74 ರ ಸಂವಿಧಾನ ತಿದ್ದುಪಡಿಯ ಬಗ್ಗೆ ದೀರ್ಘ ಸಮಾಲೋಚನೆ ಮಾಡಬೇಕಾಗಿದೆ. ಇನ್ನೂ ವಿಕೇಂದ್ರೀಕರಣ ವ್ಯವಸ್ಥೆ ಸಬಲೀಕರಣ ಮಾಡಿ ಬಲವರ್ಧನೆಗೆ ಹೊಸ ತಿದ್ದುಪಡಿ ಮಾಡಲು ಶಾಸನಗಳನ್ನು ರಚಿಸಲು ವಿಶೇಷ ಸದನ ಕರೆಯಬೇಕು. ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಜನ ಪ್ರತಿನಿಧಿಗಳಿಗೆ ಹೆಚ್ಚಿನ ಅಧಿಕಾರ ನೀಡಿ ಅಭಿವೃದ್ಧಿಗಾಗಿ ನೀಲಿ ನಕ್ಷೆ ಸಿದ್ಧಪಡಿಸಬೇಕಾಗಿದೆ ಎಂದು ಹೇಳಿದ್ದಾರೆ.