ಹಳಿಯಾಳ:
ಕೊಲ್ಲಾಪುರದಲ್ಲಿ ಕನ್ನಡ ಧ್ವಜವನ್ನು ಸುಟ್ಟ ಮಹಾರಾಷ್ಟ್ರ ಏಕೀಕರಣ ಸಮಿತಿಯ ಮುಖಂಡನೋರ್ವನ ಮುಖಕ್ಕೆ ಮಸಿ ಬಳಿದ ಸ್ವಾಭಿಮಾನಿ ಕನ್ನಡದ ಕಾರ್ಯಕರ್ತನ ಮೇಲೆ ಕೊಲೆ ಪ್ರಕರಣ ದಾಖಲಿಸಿದ ಪೊಲೀಸರ ಕ್ರಮ ಸರಿಯಾದುದ್ದಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ಎನ್. ವಾಸರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ನಾಡಲ್ಲಿ ಜೀವಿಸುವ ಪ್ರತಿಯೊಬ್ಬನೂ ಇಲ್ಲಿಯ ಸಂಗತಿಗಳಿಗೆ ಗೌರವಕೊಟ್ಟು ನಡೆಯಬೇಕು. ಕನ್ನಡ ಧ್ವಜವನ್ನು ಸುಡುವ ಮೂಲಕ ಈ ನಾಡಿನ ಭಾವೈಕ್ಯತೆಗೆ ಹಾಗೂ ನಾಡು ನುಡಿಯ ವಿಚಾರಕ್ಕೆ ಧಕ್ಕೆ ತರುವ ಕೆಲಸ ಮಾಡಲಾಗಿದೆ. ಇಂತಹ ಕೆಲಸವನ್ನು ಯಾರೇ ಮಾಡಿದರೂ ಸಹಿಸುವುದಿಲ್ಲ. ಶಿವಸೇನೆ ಹಾಗೂ ಎಂ. ಇ. ಎಸ್. ಕಾರ್ಯಕರ್ತರು ಪದೇ ಪದೇ ಬೆಳಗಾವಿಯ ಗಡಿಯಲ್ಲಿ ಅದರಲ್ಲೂ ಪ್ರತೀ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಇಂತಹ ಕುಕೃತ್ಯ ಮಾಡುತ್ತಿದ್ದು, ಇದನ್ನು ಮಟ್ಟಹಾಕುವ ಕೆಲಸ ಸರಕಾರ ಮಾಡಬೇಕಿದೆ.
ಅಧಿವೇಶನದಲ್ಲಿ ಚರ್ಚಿಸಿ, ದಿಟ್ಟ ನಿಲುವು ಪ್ರಕಟಿಸಬೇಕಿದೆ. ಎಂ. ಇ. ಎಸ್. ಕಿಡಿಗೇರಿಗಳು ಕನ್ನಡದ ಬಾವುಟವನ್ನು ಸುಟ್ಟಿದ್ದು ಕ್ಷಮಿಸಲಾರದಂತಹ ಹೇಯಕೃತ್ಯ. ಅಂತಹ ನಾಡದ್ರೋಹದ ಕೆಲಸ ಮಾಡಿದವರ ಮೇಲೆ ಸರಕಾರ ಹಾಗೂ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು. ಅದನ್ನು ಬಿಟ್ಟು ಕೇವಲ ಮಸಿ ಬಳಿದ ಕನ್ನಡದ ಕಾರ್ಯಕತನ ಮೇಲೆಯೇ ಕೊಲೆಯ ಪ್ರಕರಣ ದಾಖಲಿಸುವುದು ಸಮಂಜಸವಾದುದಲ್ಲ. ಸರಕಾರ ತಕ್ಷಣ ಈ ಪ್ರಕರಣವನ್ನು ಹಿಂಪಡೆಯಬೇಕು ಹಾಗೂ ನಾಡದ್ರೋಹದ ಕೆಲಸ ಮಾಡಿದ ಎಂ. ಇ. ಎಸ್. ಪುಂಡರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.