ಮುಂಡಗೋಡ: ನಗರದ ಬಸವೇಶ್ವರ ನಗರದ ಅಂಗನವಾಡಿ ಕಾರ್ಯಕರ್ತೆಯ ಆಭರಣ ತೊಳೆದು ಕೊಡುವುದಾಗಿ ನಂಬಿಸಿ, ತಾಳಿ ಚೈನನ್ನು ಕದ್ದು ಪರಾರಿಯಾದ ಘಟನೆ ಶುಕ್ರವಾರ ನಡೆದಿದೆ.
ಅಂಗನವಾಡಿಗೆ ಬಂಗಾರದ ಆಭರಣ ತೊಳೆದು ಕೊಡುವುದಾಗಿ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯ ತಾಳಿ ಚೈನನ್ನು ತೊಳೆದುಕೊಡುವುದಾಗಿ ನಂಬಿಸಿದ್ದಾರೆ. ಇದನ್ನು ನಂಬಿದ ಅಂಗನವಾಡಿ ಕಾರ್ಯಕರ್ತೆ ಶಾಂತಾ ಬುದ್ದಿ ಎಂಬುವವರು ಬೆಳ್ಳಿಯ ಚೈನ ಮೊದಲು ತೊಳೆದು ಕೊಡುವಂತೆ ಹೇಳಿದ್ದಾರೆ. ಅದರಂತೆ ಅಪರಿಚಿತರು ತೊಳೆದುಕೊಟ್ಟಿದ್ದಾರೆ. ನಂತರ ಕಾರ್ಯಕರ್ತೆಯ ಕೈಗೆ ಅಪರಿಚಿತ ವ್ಯಕ್ತಿಗಳು ಯಾವುದೋ ಬೂದಿ ರೂಪದ ಪುಡಿಯನ್ನು ಕೊಟ್ಟಿದ್ದಾರೆ.
ಕಾರ್ಯಕರ್ತೆಯು ಬಂಗಾರದ 35-40ಗ್ರಾಂ ತೂಕದ ಮಾಂಗಲ್ಯ ಸರವನ್ನು ಅಪರಿಚಿತರ ಕೈಗೆ ಕೊಟ್ಟಿದ್ದಾಳೆ. ಆಗ ಅಪರಿಚಿತರು ಅಂಗನವಾಡಿಯಲ್ಲಿದ್ದ ಕುಕ್ಕರನಲ್ಲಿ ಆಭರಣ ಹಾಕುವಂತೆ ಅದರ ಜೊತೆಗೆ ಪುಡಿಯನ್ನು ಹಾಕಿ ತೊಳೆಯುವುದಾಗಿ ಹೇಳಿದ್ದಾರೆ. ಯಾರಿಗೂ ತಿಳಿಯದಂತೆ ಮಾಂಗಲ್ಯದ ಸರವನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡ ಅಪರಿಚಿತರು, ಕುಕ್ಕರಿನಲ್ಲಿ ಪುಡಿ ಮತ್ತು ನೀರು ಹಾಕಿ ಕುದಿಸಿ ಸ್ವಲ್ಪ ಹೊತ್ತಿನ ಬಳಿಕ ತೆಗೆಯುವಂತೆ ಸೂಚಿಸಿ ಅಲ್ಲಿಂದ ಕಾಲು ಕಿತ್ತಿದ್ದಾರೆ.
ಕೆಲ ಸಮಯದ ನಂತರ ಅಂಗನವಾಡಿ ಕಾರ್ಯಕರ್ತೆಯು ಕುಕ್ಕರ ತೆಗೆದು ನೋಡಿದಾಗ ಬಂಗಾರದ ಆಭರಣಗಳು ಕುಕ್ಕರನಲ್ಲಿ ಇಲ್ಲದಿರುವುದು ಕಂಡುಬಂದಿದೆ. ಇದರಿಂದ ಗಲಿಬಿಲಿಗೊಂಡು ಕಾರ್ಯಕರ್ತೆ ಹಾಗೂ ಸಹಾಯಕಿಯು ಪೆÇಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೆÇಲೀಸರು ಮಾಹಿತಿ ಪಡೆದಿದ್ದಾರೆ.