ಮುಂಡಗೋಡ: ತಾಲೂಕಿನ ಅತ್ತಿವೇರಿ ಪಕ್ಷಿಧಾಮಕ್ಕೆ ವಿವಿಧ ಭಾಗಗಳಿಂದ ಹಲವಾರು ಬಗೆಯ ಪಕ್ಷಿಗಳು ಆಗಮಿಸಿ ಬಿಡುಬಿಟ್ಟಿರುವುದು ಪಕ್ಷಿ ಪ್ರಿಯರಿಗೆ ಸಂತಸವನ್ನುoಟು ಮಾಡಿದೆ. ಸೂರ್ಯ ಉದಯಿಸುವ ಮುನ್ನವೇ ಹಕ್ಕಿಗಳ ಚಿಲಿಪಿಲಿ ಸದ್ದು, ಎತ್ತನೋಡಿದರತ್ತ ಪಕ್ಷಿಗಳು ಕಾಣಸಿಗುತ್ತವೆ.
ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವ ಪಕ್ಷಿಗಳ ಕಲರವ ನೋಡಲು ಎರಡು ಕಣ್ಣುಗಳು ಸಾಲದು. ತಾಲೂಕಿನ ಹುನಗುಂದ ಗ್ರಾಮ ಪಂಚಾಯತ ವ್ಯಾಪ್ತಿಯ ಅತ್ತಿವೇರಿ ಗ್ರಾಮದ ಸನಿಹದಲ್ಲಿ ಪಕ್ಷಿಧಾಮವಿದ್ದು ಹಲವಾರು ದಶಕಗಳಿಂದಲೂ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ದೇಶ. ವಿದೇಶದ ನೂರಾರು ಬಗೆಯ ಪಕ್ಷಿಗಳು ವಲಸೆ ಬಂದು ವಂಶಾಭಿವೃದ್ಧಿ ಮಾಡಿಕೊಂಡು ಮಾರ್ಚ್ ಏಪ್ರಿಲ್ ತಿಂಗಳ ವೇಳೆಗೆ ಮರಳುವುದು ಸಾಮಾನ್ಯ.
ಪಕ್ಷಿಧಾಮದ ಬಳಿಯಿರುವ ಜಲಾಶಯದ ನಡುಗಡ್ಡೆಗಳಲ್ಲಿ ಹಾಗೂ ಸುತ್ತಲಿನ ದಟ್ಟ ಅರಣ್ಯದಲ್ಲಿನ ಮರಗಳಲ್ಲಿ ಗೂಡು ಕಟ್ಟಿಕೊಂಡು ವಂಶಾಭಿವೃದ್ಧಿ ಗೊಳಿಸಿಕೊಂಡು ನಂತರ ಮರಿಗಳೊಂದಿಗೆ ಮಾರ್ಚ್ ತಿಂಗಳ ಅವಧಿಗೆ ವಿದೇಶಕ್ಕೆ ಮರಳುತ್ತವೆ.