ಯಲ್ಲಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಕೋಳಿಕೇರಿ ಗ್ರಾಮದ ಬಳಿ ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಕೋಳಿ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ.
ಶುಕ್ರವಾರ ಬೆಳಿಗ್ಗೆ 7ಗಂಟೆಯ ಸುಮಾರು ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಮಾಂಸದ ಕೋಳಿಗಳನ್ನು ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿರಸ್ತೆ ಪಕ್ಕದಲ್ಲಿ ಉರುಳಿ ಬಿದ್ದಿದೆ. ಕೊಳಿಕೇರಿ ಸಮೀಪವೇ ಅಪಘಾತ ಸಂಭವಿಸಿದ್ದು, ಗ್ರಾಮದ ಕೆಲವು ಜನ ಸೇರಿದಂತೆ, ಅಕ್ಕಪಕ್ಕದ ಇನ್ನಿತರ ಗ್ರಾಮದ ಜನ ಬಿದ್ದಿರುವ ಜೀವಂತ ಕೋಳಿಗಳನ್ನು ಸಾಗಿಸುತ್ತಿರುವುದು ಕಂಡು ಬಂದಿದೆ.
ಅಪಘಾತದಲ್ಲಿ ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್ ಗೆ ಯಾವುದೇ ರೀತಿಯ ಗಂಭೀರ ಸ್ವರೂಪದ ಗಾಯಗಳಾಗಿಲ್ಲ. ಆದರೆ, ಲಕ್ಷಾಂತರ ಬೆಲೆ ಬಾಳುವ ಸಾವಿರಾರು ಕೋಳಿಗಳು ಮೃತಪಟ್ಟಿವೆ.