ಯಲ್ಲಾಪುರ: ಬೆಂಗಳೂರಿನ ಕೋರಮಂಗಲ ಸರಕು ಮತ್ತು ಸೇವಾ ವಿಭಾಗದಲ್ಲಿ ಸಹಾಯಕ ಆಯುಕ್ತರಾಗಿರುವ ತಾಲೂಕಿನ ಮಂಚಿಕೇರಿ ಸಮೀಪದ ಬಾಳ್ಕಲ್ ನ ಸಹನಾ ಬಾಳ್ಕಲ್ ಕರ್ನಾಟಕ ಆರ್ಥಿಕ ಮಂತ್ರಾಲಯದ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾಗಿ(ಡಿಸಿ) ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ಮತ್ತು ಕಡಿಮೆ ಅವಧಿಯಲ್ಲಿ ಉನ್ನತ ಸ್ಥಾನಕ್ಕೇರಿದ ಉತ್ತರ ಕನ್ನಡ ಜಿಲ್ಲೆಯ ಮೊದಲ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ 2014 ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಗಳಿಸಿ 2017 ರಲ್ಲಿ ಸೇವೆಗೆ ಸೇರಿದ್ದರು.
ದೂರಸಂಪರ್ಕ ಇಂಜನೀಯರಿಂಗ್, ಸಾರ್ವಜನಿಕ ಆಡಳಿತ ಮತ್ತು ಪರಿಸರ ಕಾನೂನಿನಲ್ಲಿಯೂ ಉನ್ನತ ಪದವಿ ಪಡೆದಿರುವ ಇವರು, ಪತಿ ಅಶ್ವಿನಿಕುಮಾರ್ ನಿರ್ದೇಶನದ ಅಂತರಾಷ್ಟೀಯ ಮನ್ನಣೆ ಪಡೆದ ಅಘನಾಶಿನಿ ಸಾಕ್ಷ್ಯ ಚಿತ್ರದ ಸಂಯೋಜನೆ ಮಾಡಿದ್ದಾರೆ. ಅದರ ಕನ್ನಡದ ಅವತರಣಿಕೆಗೆ ಧ್ವನಿ ನೀಡಿದ್ದಾರೆ. ಇದೀಗ ಕರ್ನಾಟಕ ಆರ್ಥಿಕ ಮಂತ್ರಾಲಯದ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾಗಿ(ಡಿಸಿ) ಬಡ್ತಿ ಹೊಂದಿದ್ದಾರೆ. ಸಹನಾ ಇಲ್ಲಿಯ ಚೇತನಾ ಪ್ರಿಂಟರ್ಸ್ ನ ರಾಮಕೃಷ್ಣ ಬಾಳ್ಕಲ್ ಮತ್ತು ಶ್ರೀಮತಿ ಬಾಳ್ಕಲ್ ದಂಪತಿಯ ಪುತ್ರಿ.