ಭಟ್ಕಳ: ಅಪರಾಧ ತಡೆಗಟ್ಟುವ ಕುರಿತು ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳು ಜ್ಞಾನವನ್ನು ವೃದ್ಧಿಸಿಕೊಂಡು ಉತ್ತಮ ನಾಗರಿಕರಾಗಲು ಪ್ರಯತ್ನಿಸಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ದೇಶಕ್ಕೆ ಕೊಡುಗೆ ನೀಡಿ ಉತ್ತಮ ಪ್ರಜೆಗಳಾಗುವಂತಾಗಬೇಕು ಎಂದು ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಮಹಾಬಲೇಶ್ವರ ಎನ್ ಹೇಳಿದರು.
ಮುರುಡೇಶ್ವರದ ಆರ್.ಎನ್.ಎಸ್ ರೂರಲ್ ಪಾಲಿಟೆಕ್ನಿಕ್, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮುರುಡೇಶ್ವರ ಪೊಲೀಸ್ ಠಾಣೆ ಇವರ ಸಂಯುಕ್ತ ಆಶ್ರಯದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಚಾರ್ಯ ಕೆ. ಮರಿಸ್ವಾಮಿ ಮಾತನಾಡುತ್ತ, ಇಂದಿನ ಆಧುನಿಕ ಯುಗದಲ್ಲಿ ನವೀನ ತಂತ್ರಜ್ಞಾನ ಬೆಳದಂತೆ ಅದರ ಜೊತೆಗೆ ದಿನನಿತ್ಯ ಹೊಸ ಬಗೆಯ ಸೈಬರ್ ಅಪರಾಧಗಳು ಸಮಾಜದಲ್ಲಿ ಘಟಿಸುತ್ತಿವೆ. ಇವುಗಳ ತಡೆಗೆ ಪೊಲೀಸರ ಜೊತೆಗೆ ಕೈಜೋಡಿಸುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಈ ಸಮಾರಂಭದ ಮೊದಲಿಗೆ ಮುರುಡೇಶ್ವರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರ್ ರಮಾನಂದ ಕೊಣ್ಣೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ಮುರುಡೇಶ್ವರ ಪೊಲೀಸ್ ಠಾಣೆಯ ಹವಾಲ್ದಾರ್ ರಾಜು ನಾಯ್ಕ ವಂದಿಸಿದರು.