ಶಿರಸಿ: ವಿಶ್ವಶಾಂತಿ ಸೇವಾ ಟ್ರಸ್ಟ್ ವತಿಯಿಂದ ಇಲ್ಲಿನ ಬೆಟ್ಟಕೊಪ್ಪದಲ್ಲಿ ಆಯೋಜಿಸಿದ್ದ ನಮ್ಮನೆ ಹಬ್ಬದ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ನೆಲಮೂಲ ಹಾಗೂ ಸಂಸ್ಕೃತಿ ನೆನಪಿಸುವ, ಪುನರಪಿ ಜಪಿಸುವ ಕಾರ್ಯ ಸದಾಕಾಲ ಆಗಬೇಕು ಎಂದು ಖ್ಯಾತ ಚಿತ್ರನಟಿ ತಾರಾ ಅನುರಾಧ ಹೇಳಿದರು.
ಬೇರು ಇರುವಲ್ಲೇ ಸೆಳೆತ ಜಾಸ್ತಿ. ಹಾಗಾಗಿ ನೆಲದ ಮೂಲ ಯಾರೂ ಮರೆಯಬಾರದು. ಅದನ್ನು ಮರೆತರೆ ಅಶಾಂತಿ ಮೂಡುತ್ತದೆ. ವಿಶ್ವಶಾಂತಿ ಇರಬೇಕಾದರೆ ಸಂಸ್ಕೃತಿ ಪರಿಪಾಲನೆ ಆಗಬೇಕು ಎಂದರು. ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ ಮಾತನಾಡಿ, ಸಮಾಜದಲ್ಲಿ ಮನಸ್ಸು ಕಟ್ಟುವ ಕಾರ್ಯ ಆಗಬೇಕು. ಅಂಥ ಕಾರ್ಯ ಪ್ರತಿ ಕುಟುಂಬದಲ್ಲಿ ಆಗಬೇಕು ಎಂದರು. ಶಾಂತಿಯನ್ನು ಹೊರಗೆ ಹುಡುಕುವ ಬದಲು ಮನಸ್ಸಿನ ಆಳದಲ್ಲಿ ಅದನ್ನು ಪಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಹಾಗೂ ಸೆಲ್ಕೊ ಸೋಲಾರ ಸಿಇಒ ಮೋಹನ ಹೆಗಡೆ ಅವರಿಗೆ ನಮ್ಮನೆ ಪ್ರಶಸ್ತಿ ಹಾಗೂ ಯುವ ಕಲಾವಿದ ವಿಭವ ಮಂಗಳೂರು ಅವರಿಗೆ ನಮ್ಮನೆ ಯುವ ಪುರಸ್ಕಾರ ನೀಡಿ ಗೌರವಿಸಲಾಯಿತು.
ಹಿರಿಯ ಪತ್ರಕರ್ತ ರವೀಂದ್ರ ಭಟ್ಟ, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ, ಚಿತ್ರನಟ ರಾಮಕೃಷ್ಣ ನೀರ್ನಳ್ಳಿ ಇದ್ದರು. ಟ್ರಸ್ಟ್ ಅಧ್ಯಕ್ಷೆ ಭುವನೇಶ್ವರಿ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಭಾರತಿ ಹೆಗಡೆ ಸಂಗಡಿಗರು ಪ್ರಾರ್ಥಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ಪ್ರಾಸ್ತಾವಿಕ ಮಾತನಾಡಿದರು. ಗಾಯತ್ರಿ ರಾಘವೇಂದ್ರ ಪ್ರಶಸ್ತಿ ಪತ್ರ ವಾಚಿಸಿದರು. ಅರೆಹೊಳೆ ಸದಾಶಿವರಾವ್ ನಿರೂಪಿಸಿದರು. ರಮೇಶ ಕಾನಗೋಡ ವಂದಿಸಿದರು.