ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಗೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕರಡಿ ದಾಳಿಗೆ ಒಳಗಾದ ರಾಮಾ ಗುರಖ್ಯಾ ಗೌಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ಹಾಗೂ ಹೆಚ್ಚಿನ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವ ಮೂಲಕ ಶಾಸಕಿ ರೂಪಾಲಿ ನಾಯ್ಕ ಮಾನವೀಯತೆ ಮೆರೆದಿದ್ದಾರೆ.
ರಾಮಾಗೌಡ ಅವರು ಮೇವಿಗಾಗಿ ದನಗಳನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟು ಬರುತ್ತಿದ್ದ ಸಂದರ್ಭದಲ್ಲಿ ಮರಿಗಳೊಂದಿಗೆ ಇದ್ದ ತಾಯಿ ಕರಡಿ ಏಕಾಏಕಿ ದಾಳಿ ನಡೆಸಿದೆ. ರಾಮಾಗೌಡ ಅವರ ಮುಖ, ಕಣ್ಣು ಹಾಗೂ ಕೈಗಳಿಗೆ ಗಂಭೀರವಾಗಿ ಗಾಯಗೊಳಿಸಿದೆ. ವಿಷಯ ತಿಳಿದ ಕೂಡಲೇ ಜಿಲ್ಲಾ ಆಸ್ಪತ್ರೆಗೆ ಕರೆತಂದು ಪ್ರಥಮಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಲು ಶಾಸಕರು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ.
ಅಲ್ಲದೇ, ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ದೂರವಾಣಿಯ ಮೂಲಕ ಸಂಪರ್ಕಿಸಿ, ಸರ್ಕಾರದಿಂದ ಸಿಗಬೇಕಾದ ಪರಿಹಾರಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು ಹಾಗೂ ಬೀಟ್ ವ್ಯವಸ್ಥೆಯನ್ನು ಹೆಚ್ಚಿಸಿ, ಜನರಿಗೆ ಆಗಬಹುದಾದ ಅಪಾಯವನ್ನು ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.