ಶಿರಸಿ: ಮಹಾವಿದ್ಯಾಲಯಗಳ ಆವಾರಗಳು ಲವ್ ಜಿಹಾದ್‍ಗೆ ಬಳಕೆಯಾಗದಂತೆ ಎಚ್ಚರ ವಹಿಸುವಂತೆ ಹವ್ಯಕ ಜಾಗೃತಿ ಕಾರ್ಯಪಡೆ ಹಾಗೂ ಹಿಂದು ಜಾಗರಣ ವೇದಿಕೆಯಿಂದ ಕಾಲೇಜುಗಳ ಪ್ರಾಂಶುಪಾಲರುಗಳಿಗೆ ಮನವಿ ಸಲ್ಲಿಸಲಾಗಿದೆ.
ಹವ್ಯಕ ಜಾಗೃತಿ ಕಾರ್ಯಪಡೆಯು ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಅಂಗಸಂಸ್ಥೆಯಾಗಿದ್ದು, ಹವ್ಯಕ ಸಮಾಜದಲ್ಲಿ ಧರ್ಮ ಜಾಗೃತಿ ಮಾಡುವ ಕಾರ್ಯದಲ್ಲಿ ಮತ್ತು ಹವ್ಯಕ ಯುವಕ-ಯುವತಿಯರು ದಾರಿ ತಪ್ಪದಂತೆ ಕಾಳಜಿ ವಹಿಸುವ ಕೆಲಸದಲ್ಲಿ ತೊಡಗಿಕೊಂಡಿದೆ. ಹಿಂದೂ ಜಾಗರಣ ವೇದಿಕೆಯು ಹಿಂದೂ ಸಮಾಜದಲ್ಲಿ ದೇಶ ಮತ್ತು ಧರ್ಮದ ವಿಚಾರಗಳಲ್ಲಿ
ಜಾಗೃತಿ ಮೂಡಿಸುವ ಮುಂಚೂಣಿ ಸಂಘಟನೆಯಾಗಿದೆ. ಇವೆರಡೂ ಸಂಘಟನೆಗಳು ಕಳೆದ ಅನೇಕ ವರ್ಷಗಳಿಂದ ಲವ್ ಜಿಹಾದ್ ವಿರುದ್ಧ ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಅರಿವು ಮೂಡಿಸುತ್ತ ಬಂದಿದೆ.
ಪ್ರಸ್ತುತ ಶಿರಸಿಯ ಅನೇಕ ಮಹಾವಿದ್ಯಾಲಯಗಳ ಆವಾರಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಲವ್ ಜಿಹಾದ್ ಎಂಬುದು ಅಂತಾರಾಷ್ಟ್ರೀಯ ಭಯೋತ್ಪಾದನಾ ಚಟುವಟಿಕೆಗಳ ಒಂದು ಮುಖ್ಯ ಭಾಗವಾಗಿದ್ದು, ಇದರಲ್ಲಿ ಸಿಲುಕಿದ ಹಿಂದೂ ಹೆಣ್ಣುಮಕ್ಕಳು ಮತಾಂತರ ಹೊಂದಿ ಐಸಿಸ್‍ನಂತಹ ಭಯೋತ್ಪಾದಕ ಸಂಘಟನೆಯನ್ನು ಸೇರಿರುವುದು ಸಾಕಷ್ಟು ದೊಡ್ಡ ಸುದ್ದಿಯಾಗಿದ್ದು ತಮ್ಮ ಗಮನಕ್ಕೂ ಬಂದಿರಬಹುದು. ಲವ್ ಜಿಹಾದ್‍ನ ಅಪಾಯಗಳ ಬಗ್ಗೆ ಕೇರಳ ಉಚ್ಛ ನ್ಯಾಯಾಲಯದಲ್ಲಿ ವಿಸ್ತತ ಚರ್ಚೆಯಾಗಿದೆ. ಕೇಂದ್ರ ಸರಕಾರವಂತೂ ಭಯೋತ್ಪಾದನಾ ಚಟುವಟಿಕೆಗಳಿಂದ ರಾಷ್ಟ್ರದ ಭದ್ರತೆಗೆ ಎಂತಹ ಗಂಡಾಂತರ ಉಂಟಾಗಿದೆ ಎಂಬುದನ್ನು ಪ್ರತಿನಿತ್ಯವೆಂಬಂತೆ ಹೇಳುತ್ತಲಿದೆ. ಪರಿಸ್ಥಿತಿ ಹೀಗಿರುವಾಗ ಶಿರಸಿಯಲ್ಲೂ ಲವ್ ಜಿಹಾದ್ ನಡೆಯುತ್ತಿರುವುದು ಕಳವಳಕಾರಿ ಬೆಳವಣಿಗೆ, ಶಿಕ್ಷಣ ಸಂಸ್ಥೆಗಳ ಆವಾರಗಳೇ ಈ ರೀತಿಯ ಚಟುವಟಿಕೆಗಳ ಕೇಂದ್ರ ಸ್ಥಾನ ಎನ್ನುವುದು ಗಮನಾರ್ಹ. ಪಾಲಕರು ತಮ್ಮ ಮಕ್ಕಳನ್ನು ಮಹಾವಿದ್ಯಾಲಯಗಳಿಗೆ ಕಳಿಸುವುದು ಶಿಕ್ಷಣ ಪಡೆಯಲೆಂದೇ ವಿನಃ ಲವ್ ಮಾಡಲೆಂದಲ್ಲ. ಅದರಲ್ಲೂ ಲವ್ ಜಿಹಾದ್‍ನಂಥ ದೇಶಘಾತುಕ ಚಟುವಟಿಕೆಗಳಿಗಂತೂ ಅಲ್ಲವೇ ಅಲ್ಲ. ಅಂತಹ ಚಟುವಟಿಕೆಗಳು ಅವು ನಡೆಯಲು ಅವಕಾಶವಾದ ಶಿಕ್ಷಣ ಸಂಸ್ಥೆಗಳಿಗೆ ಕಳಂಕಪ್ರಾಯ.
ಹೀಗಾಗಿ ಶಿಕ್ಷಣ ಸಂಸ್ಥೆಗಳು ಸ್ಟೇಚ್ಛಾಚಾರದ ಹಾಗೂ ಲವ್ ಜಿಹಾದ್ ನಂಥ ಘಾತುಕ ವಿಷವರ್ತುಲಗಳಿಗೆ ಆಡಂಬೋಲವಾಗದಂತೆ ಕಾಳಜಿ ವಹಿಸಬೇಕಾಗಿದೆ. ಅಂತಹ ಪ್ರಕರಣಗಳು ನಡೆಯುತ್ತಿರುವುದು ತಮ್ಮ ಗಮನಕ್ಕೆ ಬಂದರೆ, ಸಂಬಂಧಪಟ್ಟ ಪಾಲಕರನ್ನು ಕರೆಸಿ ಅವರಿಗೆ ತಿಳಿ ಹೇಳುವುದೂ ಅಷ್ಟೇ ಮಹತ್ವದ್ದು. ಈ ಎರಡೂ ವಿಷಯಗಳ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಕೋರಲಾಗಿದೆ.