ಕಾರವಾರ: ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನೊಂದಿಗೆ ನನ್ನ ಗೆಲುವಿಗಾಗಿ ಹಗಲಿರುಳು ಶಕ್ತಿ ಮೀರಿ ಕೆಲಸ ಮಾಡಿದ ಪಕ್ಷದ ಸಚಿವರು, ಸಭಾಪತಿಗಳು, ಸಂಸದರು, ಶಾಸಕರು, ಮುಖಂಡರು, ಕಾರ್ಯಕರ್ತರು ಹಾಗೂ ಅತ್ಯುತ್ಸಾಹದಿಂದ ಮತ ಚಲಾಯಿಸಿದ ಚುನಾಯಿತ ಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಉತ್ತರಕನ್ನಡ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಪಕ್ಷದ ಅಭ್ಯರ್ಥಿ ಗಣಪತಿ ಉಳ್ವೇಕರ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಹಲವು ಮತಗಟ್ಟೆಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಪಕ್ಷದ ಎಲ್ಲಾ ಜನಪ್ರತಿನಿಧಿಗಳಿಗೆ ಹಾಗೂ ಚುನಾಯಿತ ಸದಸ್ಯರಿಗೆ ಮತ್ತು ಕಾರ್ಯಕರ್ತರಿಗೆ ಈ ವೇಳೆ ಅಭಿನಂದನೆ ತಿಳಿಸಿದರು. ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಆಡಳಿತ ಇದ್ದು, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಪ್ರಜ್ಞಾವಂತ ಮತದಾರರು ಅಭಿವೃದ್ಧಿ ಪರ ಯೋಚಿಸಿ, ಮತ ಚಲಾಯಿಸಿದ್ದಾರೆ. ಇತಿಹಾಸದಲ್ಲೇ ಉತ್ತರಕನ್ನಡ ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ಅತಿ ಹೆಚ್ಚು ಮತಗಳಿಂದ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಕಾರ್ಯಕರ್ತರು, ಸದಸ್ಯರು ಹಾಗೂ ಎಲ್ಲರ ಶ್ರಮದಿಂದ ಬಿಜೆಪಿ ಗೆಲುವು ಸಾಧಿಸಲಿದೆ. ಚುನಾವಣೆಯಲ್ಲಿ ಮತದಾನ ಮಾಡಿದ ನನ್ನೆಲ್ಲಾ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.