ಅಂಕೋಲಾ: ಹೆಲಿಕಾಪ್ಟರ ಅಪಘಾತದಲ್ಲಿ ನಮ್ಮನ್ನಗಲಿದ, ಭಾರತೀಯ ಸೇನಾ ಮಹಾ ದಂಡನಾಯಕರಾದ ಬಿಪಿನ್ ಸಿಂಗ್ ರಾವತ್, ಹಾಗೂ ಸೇನಾ ನಾಯಕರುಗಳಿಗೆ ತಾಲೂಕಿನ ಗಡಿ ಪ್ರದೇಶವಾದ ಹೆಗ್ಗಾರಿನ ಮಹಾಗಣಪತಿ ದೇವಸ್ಥಾನದ ಆವಾರದಲ್ಲಿ ಡಿ.10 ರಂದು ಊರ ನಾಗರಿಕರೆಲ್ಲ ಸೇರಿ ಶ್ರದ್ಧಾಂಜಲಿ ಅರ್ಪಿಸಿ, ಪುಷ್ಪ ನಮನ ಸಲ್ಲಿಸಿ, ಮೌನಾಚರಣೆ ಸಮರ್ಪಿಸಿದರು.
ಊರ ಪ್ರಮುಖರೂ, ವೈದಿಕರೂ ಆದ ವಿ ಎನ್ ಭಟ್ಟ ಗುರೂಜಿಮನೆ ಮಾತನಾಡಿ, ದೇಶದ ಸೇನೆಯ ಮೂರು ವಿಭಾಗಗಳನ್ನೂ ಮುನ್ನಡೆಸುವ ಮಹಾದಂಡನಾಯಕರಾದ ಬಿಪಿನ್ ರಾವತ್ ಹಾಗೂ ಸೇನಾ ನಾಯಕರುಗಳ ಅಕಾಲಿಕ ಮರಣವೆಂಬುದು ಅತ್ಯಂತ ದುಃಖದಾಯಕವಾಗಿದೆ. ಭಾರತೀಯ ಸೇನೆಯು ಜಗತ್ತಿನಲ್ಲೇ ಸದೃಢ ಸೇನೆಯಾಗುವತ್ತ ಕಾಲಿಡಲು ಬಿಪಿನ್ ರಾವತ್ ರವರ ಶ್ರಮ ಅಪಾರವಾಗಿತ್ತು. ಅವರ ದೃಢವಾದ ಎಚ್ಚರಿಕೆಯ ಮಾತುಗಳಿಂದ ಚೀನಾದೇಶವು ತನ್ನ ಆಟಾಟೋಪಗಳನ್ನು ನಿಲ್ಲಿಸಿತ್ತು. ಇಂಥವರ ನೆನಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ನುಡಿ ನಮನ ಸಲ್ಲಿಸಿದರು.
ಗ್ರಾಮ ಪಂಚಾಯತ ಸದಸ್ಯ ನಾರಾಯಣ ಭಟ್ಟ ಮಾತನಾಡಿ, ಸೇನೆಗೆ ಸೇರುವುದು ಒಂದು ತಪಸ್ಸಿದ್ದಂತೆ, ಅಂತಹ ದೃಢ ಮನಸ್ಸಿನಿಂದ ಸೇನೆಯನ್ನು ಸೇರಿ, ಕೆಳಹಂತದಿಂದ ಮಹಾದಂಡನಾಯಕರ ಹುದ್ದೆಗೆ ಮೇಲೇರಿದ ಬಿಪಿನ್ ರಾವತ್ ನಮಗೆಲ್ಲ ಮಾದರಿ ಎಂದು ನಮನ ಸಲ್ಲಿಸಿದರು. ವೈದಿಕರಾದ ಯೋಗೇಶ್ ಭಟ್ಟ ಮಾತನಾಡಿ, ಸೈನಿಕರಾಗಿ ಸೇರಲು ಪೂರ್ವಜನ್ಮದ ಪುಣ್ಯ ಬೇಕು, ಆಸೆ ಪಟ್ಟವರೆಲ್ಲ ಸೈನ್ಯ ಸೇರಲು ಆಗುವುದಿಲ್ಲ, ಇಂತಹ ಪರಮ ಪುರುಷರ ನೆನಪು ಮಾಡಿಕೊಳ್ಳುವುದೇ ಪುಣ್ಯದ ಕಾರ್ಯ,ಇಂಥ ದೇಶ ಕಾಯುವ ಸೇನಾನಿಗಳೇ ನಮಗೆಲ್ಲ ಮಾದರಿ ಆಗಬೇಕು ಎಂದು ನಮನ ಸಲ್ಲಿಸಿದರು.
ಊರ ಪ್ರಮುಖರು, ಯುವಕರು ಹಾಗೂ ಚಿಕ್ಕಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಷ್ಪ ನಮನ ಸಲ್ಲಿಸಿದರು. ಹೆಗ್ಗಾರ ಪ್ರಶಾಂತ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.