ಅಂಕೋಲಾ: ತೈಲೋತ್ಪನ್ನಗಳನ್ನು ಸಾಗಾಟ ಮಾಡುವ ಟ್ಯಾಂಕರ್ ಲಾರಿ ಮಾಲೀಕರು ತೈಲೋತ್ಪನ್ನ ಕಂಪನಿಯಿಂದ ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಅನಿರ್ದಿಷ್ಟ ಮುಷ್ಕರ ಹೂಡುವದಾಗಿ ಅಂಕೋಲಾ ತಾಲೂಕು ಟ್ಯಾಂಕರ್ ಲಾರಿ ಮಾಲೀಕರ ಸಂಘ ಹೇಳಿದೆ.
ಶುಕ್ರವಾರ ಪಟ್ಟಣದ ಖಾಸಗಿ ಹೋಟೆಲಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಗಣಪತಿ ನಾಯಕ ಮೂಲೆಮನೆ ಮಾತನಾಡಿ, ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಒಂದು ವೇಳೆ ತಮಗೆ ನ್ಯಾಯ ಸಿಗದಿದ್ದರೆ ಡಿ.15 ರ ನಂತರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನ್ಯಾಯಕ್ಕಾಗಿ ಅನಿರ್ದಿಷ್ಟ ಮುಷ್ಕರ ನಡೆಸುವ ಬಗ್ಗೆ ನಿರ್ಧರಿಸಿದ್ದೇವೆ ಎಂದರು.
ತಾಲೂಕಿನ ಬಹಳಷ್ಟು ಜನ ನೌಕಾನೆಲೆ, ರೈಲ್ವೆ ಯೋಜನೆ ಮುಂತಾದವುಗಳಿಗೆ ಭೂಮಿಯನ್ನು ಕಳೆದುಕೊಂಡು ಬಂದ ಪರಿಹಾರದ ಹಣದಲ್ಲಿ ಟ್ಯಾಂಕರ್ ಲಾರಿ ಖರೀದಿಸಿ ಕಾರವಾರದ ಎಮ್‍ಎಮ್‍ಸಿಎಲ್ ತೈಲೋತ್ಪನ್ನ ಕಂಪನಿಯಲ್ಲಿ ಬಾಡಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಸಾಗಾಟದ ಗುತ್ತಿಗೆ ಪಡೆದುಕೊಂಡ ರಫ್ತುದಾರರು ತೀರಾ ಕಡಿಮೆ ಬೆಲೆಗೆ ಅಂದರೆ ಪ್ರತಿ ಕಿ.ಮೀ.ಗೆ ರೂ.1.60 ಪ್ರತಿ ಟನ್ನಿಗೆ ನಿಗದಿ ಪಡಿಸಿ ಲಾರಿಯ ಸಾಮಥ್ರ್ಯಕ್ಕಿಂತ ಹೆಚ್ಚಿನ ಓವರಲೋಡ್ ಹೇರುವಂತೆ ಒತ್ತಡ ಹೇರುತ್ತಿದ್ದಾರೆ. ಡೀಸೆಲ್ ಬೆಲೆ ಗಗನಕ್ಕೇರಿರುವದರಿಂದ ಈ ಬಾಡಿಗೆ ದರದಲ್ಲಿ ವಾಹನ ಓಡಿಸಲು ಸಾಧ್ಯವಾಗುತ್ತಿಲ್ಲ. ಇಂಧನ ಖರ್ಚು, ಟೈಯರ್ ಸವಕಳಿ, ಇನ್ಶೂರನ್ಸ್, ಡ್ರೈವರ, ಕ್ಲೀನರ ಸಂಬಳ, ಟ್ಯಾಕ್ಸ, ಎಲ್ಲ ತೆಗೆದು ಮಾಲೀಕರಿಗೆ ಏನೂ ಉಳಿಯದಂತಾಗಿದೆ ಎಂದರು.
ತೈಲೋತ್ಪನ್ನ ಕಂಪನಿಯವರು ಹೊರ ರಾಜ್ಯದವರಿಗೆ ಗುತ್ತಿಗೆ ನೀಡಿ ಸ್ಥಳೀಯ ಲಾರಿ ಮಾಲಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಲಾರಿ ಮಾಲಿಕರ ಸಂಘ ಆರೋಪಿಸಿದೆ. ಕಳೆದ 12 ವರ್ಷಗಳಿಂದ ಟ್ಯಾಂಕರ ಲಾರಿ ಮಾಲಿಕರು ಈ ಕಂಪನಿಯಲ್ಲಿ ಸಾಗಾಟ ನಡೆಸುತ್ತಿದ್ದು ಪ್ರಾರಂಭದಲ್ಲಿ ಕಾರವಾರದ ಸುರೇಂದ್ರ ನಾಯ್ಕರಿಗೆ ಸಾಗಾಟದ ಗುತ್ತಿಗೆ ನೀಡಿದ್ದರು. ಅವರ ಅವಧಿಯಲ್ಲಿ ಯಾವ ತೊಂದರೆಯೂ ಇರಲಿಲ್ಲ. ಆದರೆ ಅವರನ್ನು ತೆಗೆದು ಹೊರ ರಾಜ್ಯದವರಿಗೆ ಗುತ್ತಿಗೆ ನೀಡಿ ಸ್ಥಳೀಯರಿಗೆ ಅನ್ಯಾಯ ಮಾಡಿದ್ದಾರೆ. ಅಲ್ಲದೆ, ಗುತ್ತಿಗೆ ಪಡೆದ ತಮಿಳುನಾಡಿನ ಟ್ರಾನ್ಸ್‍ಪೋರ್ಟರಗಳು ತಮ್ಮ ವಾಹನಗಳನ್ನು ಬೆಂಗಳೂರಿನಲ್ಲಿ ಪಾಸಿಂಗ್ ಮಾಡಿಸಿ ರಾಜ್ಯದ ಲಾರಿ ಉದ್ಯಮಕ್ಕೂ ಅನ್ಯಾಯ ಮಾಡಿದ್ದಾರೆ.
ನ್ಯಾಯ ಕೇಳಲು ಹೋದರೆ ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸುವ ಬೆದರಿಕೆಯನ್ನೂ ಒಡ್ಡುತ್ತಿದ್ದಾರೆ ಎಂದಿದ್ದಾರೆ. ಲಾರಿ ನಡೆಸಲಾಗದೆ ಕಳೆದೆರಡು ವಾರಗಳಿಂದ ಲಾರಿಗಳನ್ನು ನಿಲ್ಲಿಸಲಾಗಿದೆ, ಬ್ಯಾಂಕ್ ಸಾಲ ತೀರಿಸಲಾಗದೆ. ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ, ಹೀಗಾಗಿ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ತಮಗೆ ಸೂಕ್ತ ದರ ಸಿಗುವಂತೆ ನ್ಯಾಯ ನೀಡಬೇಕಾಗಿ ಸಂಘದ ವತಿಯಿಂದ ಮನವಿ ಸಲ್ಲಿಸಿದ್ದು ಕಂಪನಿಯವರು ಒಪ್ಪದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಅನಿರ್ದಿಷ್ಟ ಮುಷ್ಕರ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಲಾರಿಗಳನ್ನು ತಡೆದು ಪ್ರತಿಭಟಿಸಲಾಗುವದು ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ತುಳಸೀದಾಸ ಕಾಮತ, ವಿನಾಯಕ ಕಾಮತ, ಅನಂತ ಭಟ್, ನಾಗರಾಜ ನಾಯ್ಕ, ಬ್ರಿಜೇಶ ನಾಯ್ಕ, ಜ್ಞಾನೇಶ್ವರ ನಾಯ್ಕ, ಪ್ರಶಾಂತ ನಾಯ್ಕ, ರೋಹಿದಾಸ ಭಟ್, ಮಹೇಶ ಭಟ್, ನಾಗೇಂದ್ರ ಗಾಂವಕರ, ಮಹೇಶ ನಾಯ್ಕ ಇನ್ನಿತರರು ಇದ್ದರು.
ಅಂಕೋಲಾ ತಾಲೂಕಾ ಟ್ಯಾಂಕರ್ ಲಾರಿ ಮಾಲೀಕರ ಸಂಘದವರು ನ್ಯಾಯಕ್ಕಾಗಿ ಆಗ್ರಹಿಸಿದ್ದು, ನ್ಯಾಯಯುತವಾಗಿದೆ. ಅವರ ಮನವಿಯಂತೆ ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಕಂಪನಿಯವರು ಅವರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡುವದು ಅನಿವಾರ್ಯವಾಗುವದು. – ಸತೀಶ ಸೈಲ್ (ಮಾಜಿ ಶಾಸಕ)